ಮಂಗಳೂರು : ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ಇದನ್ನು ಕಂಡ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಆಧಾರ್ ಕಾರ್ಡ್‌ಗಳನ್ನು ಕಂಡು ಸಾರ್ವಜನಿಕರು ಶಾಕ್ ಆಗಿದ್ದು, ಈ ಕುರಿತು ಸ್ಥಳೀಯರು ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಸಹಕಾರದಿಂದ ನೂರಾರು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಅಂಚೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸರಿಯಾದ ವಿಳಾಸಕ್ಕೆ ಆಧಾರ್ ಕಾರ್ಡ್‌ಗಳನ್ನು ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮದ ಹಲವಾರು ಕುಟುಂಬಗಳ ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿದ್ದು, ವಿಳಾಸ ಹಾಗೂ ಹೆಸರು ಬದಲಾವಣೆಗಾಗಿ ಹಣ ಪಾವತಿಸಿ ಪರಿಷ್ಕೃತ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೆ ಇದು ಆಘಾತವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮಾಹಿತಿ ನೀಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಲು ಕಾರಣವೇನು ಹಾಗೂ ಇದಕ್ಕೆ ಯಾರು ಹೊಣೆ ಎಂಬುದನ್ನು ತನಿಖೆ ನಡೆಸಿ ಪತ್ತೆಹಚ್ಚುವಂತೆ ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಅವರು ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೂಡ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : “ಸತ್ಯ ಹೇಳಿದರೆ ನಾವು ಬದುಕಲಾರೆವು” – ಪಿಸಿಬಿ ಅಧ್ಯಕ್ಷರ ವಿರುದ್ಧ ಮಾತನಾಡಲು ರಶೀದ್ ಲತೀಫ್ ಭೀತಿ!



















