ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಕೋಲ್ಕತ್ತಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ನಮ್ಮ ಕನಸು ಬ್ಯಾನರಿನ ಕೆ. ಸುರೇಶ್ ನಿರ್ಮಾಣದಲ್ಲಿ ರಮೇಶ್ ಶೆಟ್ಟಿಗಾರ್ ಬರೆದಿರುವ ಈ ಚಿತ್ರಕ್ಕೆ ದೊಡ್ಡ ಗರಿ ಬಂದಿದ್ದು, ಚಿತ್ರ ತಂಡ ಸಂತಸ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವು ಡಿಸೆಂಬರ್ 8 ಮತ್ತು 9ರಂದು ಕೋಲ್ಕತ್ತಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಚಿತ್ರದಲ್ಲಿ ಹಿರಿಯ ನಟರಾದ ಶರತ್ ಲೋಹಿತಾಶ್ವ ನಟಿಸಿದ್ದಾರೆ. ಅವರೊಂದಿಗೆ ರೂಪ ವರ್ಕಾಡಿ, ಇಳ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಕಲಾವಿದರಾದ ಮೋನಿಶ್, ತ್ರಿಷ, ದ್ರುವ, ನಿಹಾ ಸೇರಿದಂತೆ ಹಲವರು ನಟಿಸಿದ್ದಾರೆ.

ತುಳುನಾಡಿನ ವಿಶೇಷ ಕುಣಿತ, ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಉಣ್ಣಿ ಮಾಡವೂರ್ ಛಾಯಾಗ್ರಹಣವಿದೆ. ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಬರೆದಿದ್ದಾರೆ. ಚಿತ್ರವನ್ನು ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.
ಪದ್ಮಶ್ರೀ ಕೈತಪ್ರಮ್ ದಾಮೋದರನ್ ನಂಬೂದಿರಿ, ಸುಧೀರ್ ಅತ್ತಾವರ, ತುಳು ಕುಶಾಲಾಕ್ಷಿ ಕಣ್ವತೀರ್ಥ ಅವರ ಸಾಹಿತ್ಯವಿದೆ. ಡಾ. ವಿದ್ಯಾಭೂಷಣ್ ಹಿನ್ನೆಲೆ ಗಾಯನ ನೀಡಿದ್ದಾರೆ. ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಕಂಠದಾನ ಮಾಡಿದ್ದಾರೆ. ಸುರೇಶ್ ಅರಸ್ ಸಂಕಲನಕಾರರಾಗಿದ್ದಾರೆ. ಸದ್ಯ ಈ ಚಿತ್ರ ಕೋಲ್ಕತ್ತಾ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.