ಬೆಂಗಳೂರು: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ಪೋಷಕರಂತೂ ಮಕ್ಕಳನ್ನು ಪಟಾಕಿ ಅಂಗಡಿಗಳಿಗೆ ಕರೆದುಕೊಂಡು ಹೋಗಿ ಸಾವಿರಾರು ರೂಪಾಯಿ ಮೌಲ್ಯದ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ದೊಡ್ಡವರಿಗೂ ದೀಪಾವಳಿ ವೇಳೆ ಪಟಾಕಿ ಸಿಡಿಸಿದರೇನೇ ಸಮಾಧಾನ. ಆದರೆ, ಪಟಾಕಿ ಸಿಡಿಸುವಾಗ ಗಾಯಗಳಾಗುವ ಕಾರಣ ಫೋನ್ ಪೇ ಈಗ ಪಟಾಕಿ ವಿಮೆಯನ್ನು ಪರಿಚಯಿಸಿದೆ. ಕೇವಲ 9 ರೂಪಾಯಿಗೆ 25 ಸಾವಿರ ರೂಪಾಯಿಯ ವಿಮಾ ಸುರಕ್ಷತೆ ಸಿಗಲಿದೆ.
ಹೌದು, ದೇಶದ ಪ್ರಮುಖ ಯುಪಿಐ ಪೇಮೆಂಟ್ ಅಗ್ರಿಗೇಟರ್ ಆಗಿರುವ ಫೋನ್ ಪೇ ಕಂಪನಿಯು ಪಟಾಕಿ ವಿಮೆಯನ್ನು ಪರಿಚಯಿಸಿದೆ. ಒಂದು ಕುಟುಂಬದಲ್ಲಿ ನಾಲ್ವರಿಗೆ ಕೇವಲ 9 ರೂಪಾಯಿಗೆ ವಿಮಾ ಸುರಕ್ಷತೆ ಸಿಗಲಿದೆ. ಪಟಾಕಿ ಸಿಡಿಸುವಾಗ ಗಾಯಗೊಂಡರೆ ಅವರು ಆಸ್ಪತ್ರೆಗಳಲ್ಲಿ 25 ಸಾವಿರ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಮಕ್ಕಳು ಹಾಗೂ ದೊಡ್ಡವರಿಗೂ ಫೋನ್ ಪೇ ವಿಮಾ ಸೌಲಭ್ಯವು ಅನ್ವಯವಾಗಲಿದೆ. ಪ್ರತಿ ವರ್ಷ ಸಾವಿರಾರು ಜನ ಪಟಾಕಿ ಸಿಡಿಸುವಾಗ ಗಾಯಗೊಳ್ಳುತ್ತಾರೆ. ಇದರಿಂದಾಗಿ ಅವರು ಆಸ್ಪತ್ರೆಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ, ಫೋನ್ ಪೇ ವಿಮಾ ಸುರಕ್ಷತೆಯು ಜನರಿಗೆ ಅನುಕೂಲವಾಗಿದೆ. ಪಟಾಕಿ ವಿಮೆಯು 10 ದಿನಗಳವರೆಗೆ ಇರಲಿದೆ. ಅಕ್ಟೋಬರ್ 25ರಿಂದ 10 ದಿನಗಳವರೆಗೆ ಪಟಾಕಿ ವಿಮೆ ಚಾಲ್ತಿಯಲ್ಲಿರಲಿದೆ.
ವಿಮೆ ಖರೀದಿಸುವುದು ಹೇಗೆ?
• ಮೊದಲಿಗೆ ಫೋನ್ ಪೇ ಆ್ಯಪ್ ಓಪನ್ ಮಾಡಿ
• ಇನ್ಶೂರೆನ್ಸ್ ವಿಭಾಗಕ್ಕೆ ತೆರಳಿ Firecracker Insurance ಮೇಲೆ ಕ್ಲಿಕ್ ಮಾಡಿ
• ವಿಮೆಯ ಬಗ್ಗೆ ಮಾಹಿತಿಯನ್ನು ಗಮನವಿಟ್ಟು ಓದಿ
• ವಿಮಾದಾರರ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ
• 9 ರೂಪಾಯಿ ಪಾವತಿಸುವ ಮೂಲಕ ವಿಮೆಯನ್ನು ಖರೀದಿಸಿ