ಬೆಂಗಳೂರು: ರಾಜ್ಯದಲ್ಲಿ ರಾಜಕಾರಣಿಗಳಿಗೆ ಫೋನ್ ಟ್ಯಾಪಿಂಗ್ ಆಗುತ್ತದೆ ಎಂಬ ವಿಚಾರ ಈಗ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಆರೋಪ- ಪ್ರತ್ಯಾರೋಪಗಳು ದೊಡ್ಡ ವಿವಾದ ಪಡೆಯುತ್ತಿವೆ.
ಈಗ ಇದೇ ಫೋನ್ ಟ್ಯಾಪಿಂಗ್ ವಿಚಾರವನ್ನೇ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹೀಗಾಗಿ ಮಾಧ್ಯಮದ ಮುಂದೆ ಇದೇ ವಿಚಾರ ಸಾಧ್ಯವಾದಷ್ಟು ಪ್ರಸ್ತಾಪಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಫೋನ್ ಟ್ಯಾಪಿಂಗ್ ವಿಚಾರವನ್ನೇ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಲು ಬಿಜೆಪಿ ನಾಯಕರು ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ.
ಅಲ್ಲದೇ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಫೋನ್ ಟ್ಯಾಪಿಂಗ್ ವಿಚಾರವನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಲು ಕೂಡ ಬಿಜೆಪಿ ನಿರ್ಧರಿಸಿದೆ. ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ಕಳೆದೆರಡು ದಿನಗಳಿಂದ ಫೋನ್ ಟ್ಯಾಪಿಂಗ್ ವಿಚಾರವಾಗಿ ಆರೋಪಿಸುತ್ತಲೇ ಬಂದಿದ್ದರು. ರಾಜ್ಯ ಸರ್ಕಾರ ವಿಪಕ್ಷದ ಸದಸ್ಯರುಗಳ ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಅವರ ಸದಸ್ಯರು ಮಾತ್ರವಲ್ಲದೇ, ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಈಗ ಅದನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿಯ ನಾಯಕರು ಸರ್ಕಾರದ ವಿರುದ್ಧ ಮುಗಿಬೀಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.