ಬೆಂಗಳೂರು : ಬೆಂಗಳೂರಿನ ಪಿಜಿಯೊಂದರಲ್ಲಿ ತಿಗಣೆ ನಿವಾರಣೆಗೆ ಸಿಂಪಡಿಸಿದ್ದ ಔಷಧಿಯ ವಿಷಕಾರಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಹೆಚ್‌ಎಎಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಪವನ್ ಮೃತ ಬಿಟೆಕ್ ವಿದ್ಯಾರ್ಥಿ.
ಸದ್ಯ ಪಿಜಿ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಹೆಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಪವನ್ ತಿರುಪತಿ ಮೂಲದವನಾಗಿದ್ದು, ಒಂದು ವಾರದ ಹಿಂದೆ ಊರಿಗೆ ಹೋಗಿದ್ದ. ಈ ಸಮಯದಲ್ಲಿ ಪಿಜಿಯಲ್ಲಿ ತಿಗಣೆ ಔಷಧ ಸಿಂಪಡಿಸಿ ರೂಮ್ ಬಂದ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಇಲ್ಲದೇ ಊರಿನಿಂದ ವಾಪಸ್ ಆದ ಪವನ್ ರೂಮ್‌ಗೆ ಪ್ರವೇಶಿಸಿ ಮಲಗಿದ್ದ. ಕೊಠಡಿಯೊಳಗೆ ಆವರಿಸಿದ್ದ ತಿಗಣೆ ಔಷಧದ ವಿಷಕಾರಿ ವಾಸನೆಯನ್ನು ಉಸಿರಾಡಿದ ಕಾರಣದಿಂದ ಪವನ್ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ವಿಷಯ ತಿಳಿದ ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಅಷ್ಟರಾಗಲೇ ಅವರು ಸಾವನ್ನಪ್ಪಿದ್ದಾರೆ.
ಸದ್ಯ ಪವನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಈ ಘಟನೆ ಸಂಬಂಧ ಹೆಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುಡಿಆರ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.