ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು, ವೃತ್ತಿಪರರು, ಸ್ವಯಂ ಉದ್ಯೋಗ ಕೈಗೊಂಡವರು ಕೂಡ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಹೂಡಿಕೆ ಮಾಡಲು ಅವಕಾಶವಿದೆ. ಹೀಗೆ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡುವವರಿಗೆ ಕೆಲವೇ ದಿನಗಳಲ್ಲಿ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ ಶೇ.80ರಷ್ಟು ಮೊತ್ತವನ್ನು ವಿತ್ ಡ್ರಾ ಮಾಡುವ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಹೌದು, ಎನ್ ಪಿ ಎಸ್ ಸದಸ್ಯರು ತಮ್ಮ ಹೂಡಿಕೆಯನ್ನು ನಿಲ್ಲಿಸಲು ಬಯಸಿದರೆ, ಅವರು ಎನ್ ಪಿ ಎಸ್ ನಿಂದ ಎಕ್ಸಿಟ್ ಆಗಲು ಆಸಕ್ತಿ ತೋರಿದರೆ, ಅವರು ಹೂಡಿಕೆ ಮಾಡಿದ ಮೊತ್ತದ ಶೇ.80ರಷ್ಟು ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಈ ಕುರಿತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿ ಎಫ್ ಆರ್ ಡಿ ಎ) ಹೊಸ ಪ್ರಸ್ತಾಪವನ್ನು ಇಟ್ಟಿದೆ.
ಇದುವರೆಗಿನ ನಿಯಮಗಳ ಪ್ರಕಾರ, ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿದವರು ನಿವೃತ್ತಿ ಅಂದರೆ, 60 ವರ್ಷದ ಬಳಿಕ ಹೂಡಿಕೆಯ ಒಟ್ಟು ಮೊತ್ತದಲ್ಲಿ ಶೇ.60ರಷ್ಟು ಮೊತ್ತವನ್ನು ಮಾತ್ರ ಒಂದೇ ಬಾರಿಗೆ ಹಿಂಪಡೆಯಲು ಅವಕಾಶವಿದೆ. ಉಳಿದ ಶೇ.40ರಷ್ಟು ಮೊತ್ತದಲ್ಲಿ ಮಾಸಿಕ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ.
ಆದರೆ, ಪಿಎಫ್ ಆರ್ ಡಿಎ ಹೊಸ ಪ್ರಸ್ತಾಪದ ಪ್ರಕಾರ, ಹೂಡಿಕೆಯ ಒಟ್ಟು ಮೊತ್ತದಲ್ಲಿ ಶೇ.80ರಷ್ಟು ಹಣವನ್ನು ಹಿಂಪಡೆದು, ಉಳಿದ ಶೇ.20ರಷ್ಟು ಹಣದಲ್ಲಿ ಪಿಂಚಣಿ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪಿಎಫ್ ಆರ್ ಡಿಎ ಹೊಸ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದರೆ, ಹೊಸ ನಿಯಮಗಳು ಜಾರಿಗೆ ಬರಲಿವೆ. ತುರ್ತು ಸಂದರ್ಭಗಳಲ್ಲಿ ಎನ್ ಪಿ ಎಸ್ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.