ಬೆಂಗಳೂರು: ಕೇಂದ್ರ ಸರ್ಕಾರವು ಈಗಾಗಲೇ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಹಣವನ್ನು ವಿತ್ ಡ್ರಾ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಮೊದಲಿನಂತೆ ಕಚೇರಿಗಳಿಗೆ ಅಲೆಯದೆ, ಮನೆಯಲ್ಲೇ ಕುಳಿತು, ಆನ್ ಲೈನ್ ಮೂಲಕ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಇದರ ಬೆನ್ನಲ್ಲೇ, ಎಟಿಎಂಗಳು ಹಾಗೂ ಯುಪಿಐ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಂಡಾವೀಯ ಅವರು ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. 2026ರ ಮಾರ್ಚ್ ನಿಂದ ಎಟಿಎಂ ಹಾಗೂ ಯುಪಿಐ ಮೂಲಕವೇ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಇಪಿಎಫ್ಒಗೆ 7.5 ಕೋಟಿ ಸದಸ್ಯರು ಇದ್ದಾರೆ.
ನಿರುದ್ಯೋಗದ ಸಂದರ್ಭದಲ್ಲಿ ಇಪಿಎಫ್ ನಿಂದ ಶೇ. 75ರಷ್ಟು ಹಣವನ್ನು ಹಿಂಪಡೆಯಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಈಗ ಇದನ್ನು ಇನ್ನಷ್ಟು ಸುಲಭಗೊಳಿಸಲು ಎಟಿಎಂ ಮತ್ತು ಯುಪಿಐ ಮೂಲಕ ನೇರವಾಗಿ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಿಎಫ್ ಖಾತೆಯಲ್ಲಿರುವ ಹಣವು ಸದಸ್ಯರ ಸ್ವಂತ ಹಣವಾಗಿದೆ. ಅದನ್ನು ಅವರು ಯಾವಾಗ ಬೇಕಾದರೂ ವಿತ್ ಡ್ರಾ ಮಾಡಬಹುದು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅನೇಕ ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇದರಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗ ಇಪಿಎಫ್ ನಿಂದ ಹಣ ಹಿಂಪಡೆಯಲು ಆನ್ ಲೈನ್ ಪೋರ್ಟಲ್, ಫಾರ್ಮ್ ಗಳು ಮತ್ತು ಅನೇಕ ಬಾರಿ ಕಂಪನಿಗಳ ಅನುಮೋದನೆಯ ಅಗತ್ಯವಿರುತ್ತದೆ. ಇದನ್ನು ತಪ್ಪಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ IIAPಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ 78 ಸಾವಿರ ರೂ. ಸಂಬಳದ ಉದ್ಯೋಗ



















