ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಪಿಎಫ್) ಸದಸ್ಯರು ಇನ್ನು ಮುಂದೆ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಇಪಿಎಫ್ಒ ಕಚೇರಿಗಳಿಗೆ ಅಲೆಯಬೇಕಿಲ್ಲ. ಆನ್ ಲೈನ್ ಅರ್ಜಿ ಸಲ್ಲಿಸಿ ವಾರಗಟ್ಟಲೇ ಕಾಯಬೇಕಿಲ್ಲ. ಎಟಿಎಂಗಳ ಮೂಲಕವೇ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಅಪ್ಡೇಟ್ ನೀಡಿದೆ. ಮೇ ಅಥವಾ ಜೂನ್ ನಲ್ಲಿ ಇಪಿಎಫ್ಒ 3.0 ಯೋಜನೆ ಜಾರಿಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
“ಮೇ ಅಥವಾ ಜೂನ್ ತಿಂಗಳಿನಲ್ಲಿ ಇಪಿಎಫ್ಒ 3.0 ಯೋಜನೆ ಜಾರಿಗೊಳಿಸಲಾಗುತ್ತದೆ. ಎಟಿಎಂ ಮೂಲಕ ಪಿಎಫ್ ವಿತ್ ಡ್ರಾ ಮಾಡುವುದು ಸೇರಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಇಪಿಎಫ್ಒ ಸದಸ್ಯರು ಹಲವು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಡಿಜಿಟಲೀಕರಣದ ಹೊಸ ಹೆಜ್ಜೆಯಾಗಿ ಇಪಿಎಫ್ಒ 3.0 ಜಾರಿಗೆ ಬರಲಿದೆ” ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಂಡಾವೀಯ ತಿಳಿಸಿದ್ದಾರೆ.
“ಆಟೋ-ಕ್ಲೇಮ್ ಸೆಟಲ್ ಮೆಂಟ್ ಗಳು, ಡಿಜಿಟಲ್ ತಿದ್ದುಪಡಿಗಳು ಮತ್ತು ಎಟಿಎಂ ಆಧಾರಿತ ನಿಧಿ ಹಿಂಪಡೆಯುವಿಕೆಗಳು ಸೇರಿ ಸುಗಮ ಮತ್ತು ಸರಳ ಸೇವೆಗಳನ್ನು ಒದಗಿಸಲು ಇಪಿಎಫ್ಒ ಶೀಘ್ರದಲ್ಲೇ ಆವೃತ್ತಿ 3.0 ಅನ್ನು ಐಟಿ ವೇದಿಕೆಯ ಸಹಾಯದಿಂದ ಜಾರಿಗೆ ತರಲಿದೆ. ಇಪಿಎಫ್ಒ ಅನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಈ ಪರಿಷ್ಕರಣೆ ಹೊಂದಿದೆ” ಎಂದು ಮಂಡಾವೀಯ ಹೇಳಿದ್ದಾರೆ.
ಅಲ್ಲದೆ, ಒಟಿಪಿ ಆಧಾರಿತ ದೃಢೀಕರಣದೊಂದಿಗೆ, ಸದಸ್ಯರು ಇಪಿಎಫ್ಒ ಕಚೇರಿಗಳಿಗೆ ಭೇಟಿ ನೀಡದೆಯೇ ತಮ್ಮ ಖಾತೆ ವಿವರಗಳನ್ನು ನವೀಕರಿಸಲು, ಪಿಂಚಣಿ ಅರ್ಹತೆಗಳನ್ನು ಟ್ರ್ಯಾಕ್ ಮಾಡಲು, ಆದೇಶಗಳನ್ನು ಸಲ್ಲಿಸಲು ಮತ್ತು ಹಣವನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ಹಿಂಪಡೆಯಲು ಸಾಧ್ಯವಾಗುತ್ತದೆ.


















