ಬೆಂಗಳೂರು : ದ್ವಿಚಕ್ರ ವಾಹನ, ಕಾರು ಸೇರಿ ಯಾವುದೇ ವಾಹನಗಳ ಮಾಲೀಕರು, ಚಾಲಕರು ಪೆಟ್ರೋಲ್ ಬಂಕ್ ಗಳಿಗೆ ತೆರಳಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವುದು ಸಾಮಾನ್ಯ. ಪೆಟ್ರೋಲ್ ಬಂಕ್ ಗಳಿಗೆ ತೆರಳಿ, ಪೆಟ್ರೋಲ್ ಹಾಕಿಸಿಕೊಂಡು, 10 ರೂಪಾಯಿ ಕೊಟ್ಟು ಟೈರ್ ಗಳಿಗೆ ಗಾಳಿ ತುಂಬಿಸುವುದಷ್ಟೇ ತುಂಬ ಜನರಿಗೆ ಗೊತ್ತಿರುವ ಸಂಗತಿ. ಆದರೆ, ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವ ಗ್ರಾಹಕರಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಸುಮಾರು ಎಂಟು ಸೇವೆಗಳು ಉಚಿತವಾಗಿ ಸಿಗುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡರೆ ಗ್ರಾಹಕರು ಉಚಿತವಾಗಿ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅವು ಯಾವುವು ಎಂಬುದರ ಮಾಹಿತಿ ಇಲ್ಲಿದೆ.
- ಟೈರ್ ಗಳಿಗೆ ಉಚಿತ ಗಾಳಿ : ವಾಹನಗಳ ಟೈರ್ ಗಳಿಗೆ ಗಾಳಿ ಹಾಕುವ ಸೌಲಭ್ಯವು ಎಲ್ಲ ಬಂಕ್ ಗಳಲ್ಲಿ ಉಚಿತವಾಗಿರಬೇಕು. ಇದಕ್ಕಾಗಿ ಸಿಬ್ಬಂದಿ ಹಣ ಪಡೆಯುವಂತಿಲ್ಲ.
- ಕುಡಿಯುವ ನೀರು : ಗ್ರಾಹಕರಿಗೆ ಕುಡಿಯಲು ಶುದ್ಧವಾದ ನೀರಿನ ವ್ಯವಸ್ಥೆ ಇರುವುದು ಕಡ್ಡಾಯ.
- ಶೌಚಾಲಯ ಸೌಲಭ್ಯ: ಗ್ರಾಹಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯದ ಸೌಲಭ್ಯ ಒದಗಿಸುವುದು ಬಂಕ್ ಮಾಲೀಕರ ಜವಾಬ್ದಾರಿ.
- ಪ್ರಥಮ ಚಿಕಿತ್ಸೆ (First Aid Kit) : ತುರ್ತು ಸಂದರ್ಭದಲ್ಲಿ ಅಥವಾ ಸಣ್ಣಪುಟ್ಟ ಅಪಘಾತಗಳಾದಾಗ ಬಳಸಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಯು ಬಂಕ್ ನಲ್ಲಿ ಲಭ್ಯವಿರಬೇಕು.
- ತುರ್ತು ಫೋನ್ ಕರೆ : ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಗ್ರಾಹಕರು ಒಂದು ಫೋನ್ ಕರೆ ಮಾಡಲು ಬಂಕ್ ನ ಲ್ಯಾಂಡ್ ಫೋನ್ ಬಳಸಲು ಅವಕಾಶವಿರಬೇಕು.
- ಗುಣಮಟ್ಟ ಮತ್ತು ಪ್ರಮಾಣ ಪರೀಕ್ಷೆ : ಪೆಟ್ರೋಲ್ ಅಥವಾ ಡೀಸೆಲ್ ನ ಗುಣಮಟ್ಟದ ಬಗ್ಗೆ ಅನುಮಾನವಿದ್ದರೆ, ‘ಫಿಲ್ಟರ್ ಪೇಪರ್ ಟೆಸ್ಟ್’ ಮೂಲಕ ಉಚಿತವಾಗಿ ಪರೀಕ್ಷಿಸಲು ಗ್ರಾಹಕರಿಗೆ ಹಕ್ಕಿದೆ. ಹಾಗೆಯೇ ಇಂಧನದ ಪ್ರಮಾಣವನ್ನು ಅಳೆಯುವ ಜಗ್ ಬಳಸಿ ಪರೀಕ್ಷಿಸಬಹುದು.
- ದೂರು ಬಾಕ್ಸ್ ಅಥವಾ ಪುಸ್ತಕ (Complaint Box) : ಸೌಲಭ್ಯಗಳ ಕೊರತೆ ಅಥವಾ ಸೇವೆ ಸರಿಯಾಗಿಲ್ಲದಿದ್ದರೆ ದೂರು ನೀಡಲು ಪ್ರತ್ಯೇಕ ಪುಸ್ತಕ ಅಥವಾ ಪೆಟ್ಟಿಗೆಯನ್ನು ಇಟ್ಟಿರಬೇಕು.
- ದರ ಪಟ್ಟಿ ಪ್ರದರ್ಶನ : ಅಂದಿನ ಇಂಧನ ದರಗಳು ಮತ್ತು ಬಂಕ್ ನ ಕೆಲಸದ ಸಮಯವನ್ನು ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
ಇದನ್ನೂ ಓದಿ : ಇಂದು ಚಿಕ್ಕಬಳ್ಳಾಪುರ ಬಂದ್.. ಎಲ್ಲಾ ಅಂಗಡಿ ಮುಂಗಟ್ಟುಗಳು ಕ್ಲೋಸ್!



















