ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ನಿರ್ದೇಶಿಸಲು ಕೋರಿ ರಾಜ್ಯ ಬಿಜೆಪಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ಹಿರಿಯ ವಕೀಲ ಸಂದೀಪ್ ಪಾಟೀಲ ಮೂಲಕ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. ಅರ್ಜಿಯಲ್ಲಿ ಮಾಜಿ ಮೇಯರ್‌ಗಳಾದ ಎಂ. ಗೌತಮ್, ಆರ್. ನಾರಾಯಣಸ್ವಾಮಿ, ಮಾಜಿ ಉಪ ಮೇಯರ್ ಎಸ್. ಹರೀಶ್ ಸಹಿ ಮಾಡಿ ಚುನಾವಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಅಧಿಕಾರವಧಿ 2019ರ ಸೆಪ್ಟೆಂಬರ್ 10ರಂದೇ ಮುಗಿದಿದೆ. ಆನಂತರ ಆರು ವಾರಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದೇಶವನ್ನು ಸುಪ್ರೀಂ ಕೋರ್ಟ್ 2020ರ ಡಿಸೆಂಬರ್ 18ರಂದು ಅಮಾನತಿನಲ್ಲಿ ಇರಿಸಿತ್ತು. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ– 2020ರಂತೆ 243 ವಾರ್ಡ್‌ಗಳ ಬದಲಿಗೆ, ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲೆಂದೇ ನೂತನ ಕಾನೂನನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸುವಂತೆ ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮೇ 20ರಂದು ಸೂಚಿಸಿತ್ತು. ಈಗ ಮತ್ತೆ ಚುನಾವಣೆಯ ಕಿತ್ತಾಟ ನಡೆಯುತ್ತಿದೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಚುನಾವಣೆ ಮುಂದೂಡಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಚುನಾವಣೆ ಯಾವಾಗ ನಡೆಯುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.