ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಮನವಿ ಮಾಡಲಾಗಿದೆ.
ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ವಿಧಾನಸಭೆ ಸ್ಪೀಕರ್ ಗೆ ಎಸ್ ಐಟಿ ತಂಡ ಮನವಿ ಮಾಡಿದೆ. ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಎಂಬುವವರಿಗೆ ಕಸ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ನೀಡುವಂತೆ ಮುನಿರತ್ನ ಬೇಡಿಕೆ ಇಟ್ಟಿದ್ದರು.
ಈ ಆರೋಪದ ಹಿನ್ನಲೆಯಲ್ಲಿ ಶಾಸಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಬೇಕಿದೆ. ಹೀಗಾಗಿ ಸ್ಪೀಕರ್ ಯು.ಟಿ.ಖಾದರ್ ಗೆ ಅನುಮತಿ ಕೋರಿ ಮನವಿ ಮಾಡಿದ್ದಾರೆ. ಒಂದು ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು, ಮನವಿಗೆ ಸ್ಪಂದಿಸಿ ಅನುಮತಿ ನೀಡಿದರೆ ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಯೋಗಿಸಲಾಗುತ್ತದೆ.
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುಗೆ ನಿಂದಿಸಿ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ವೈಯಾಲಿಕಾವಲ್ ಠಾಣೆಯಲ್ಲಿ ಜೀವ ಬೆದರಿಕೆಯಡಿ ಎಫ್ ಐಆರ್ ದಾಖಲಿಸಲಾಗಿತ್ತು. ಗುತ್ತಿಗೆದಾರನಿಂದ ಕಸ ಸಾಗಾಣಿಕೆ ಗುತ್ತಿಗೆ ನೀಡಲು 30 ಲಕ್ಷ ರೂ.ಗಳಿಗೆ ಶಾಸಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಂಗಡವಾಗಿ 10 ಲಕ್ಷ ರೂ. ನೀಡಿರುವುದಾಗಿ ವ್ಯಕ್ತಿ ಆರೋಪಿಸಿದ್ದಾರೆ.
ಹೀಗಾಗಿ ಚುನಾಯಿತ ಪ್ರತಿನಿಧಿಯಾಗಿರುವ ಶಾಸಕರು ಅಧಿಕಾರ ದುರ್ಬಳಕೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಹ ತನಿಖೆಗೆ ಅನುಮತಿ ಕೇಳಲಾಗಿದೆ.