ಕೋಲ್ಕತ್ತಾ: ನಿಮ್ಮ ಕಿಡ್ನಿಯನ್ನು ಮಾರಾಟ ಮಾಡಿದರೆ 10 ಲಕ್ಷ ರೂಪಾಯಿ ಸಿಗುತ್ತದೆ. ಆ ಹಣವನ್ನು ಮುಂದೆ ಮಗಳ ಶಿಕ್ಷಣ ವೆಚ್ಚಕ್ಕಾಗಿ ಬಳಸಬಹುದು ಎಂದು ಪತಿಯನ್ನು ಪುಸಲಾಯಿಸಿದ ಚಾಲಾಕಿ ಮಹಿಳೆಯೊಬ್ಬಳು, ಅತ್ತ ಪತಿಗೆ ಶಸ್ತ್ರಚಿಕಿತ್ಸೆ ಆಗುತ್ತಿದ್ದಂತೆಯೇ ಇತ್ತ ಆ 10 ಲಕ್ಷ ರೂ.ಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ!
ಪಶ್ಚಿಮ ಬಂಗಾಳದ ಹೌರಾದಲ್ಲಿ ಈ ಘಟನೆ ನಡೆದಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದಂಪತಿಗೆ 12 ವರ್ಷದ ಒಬ್ಬಳು ಮಗಳಿದ್ದಳು. ಈ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಪತ್ನಿಯು ಪತಿಯ ಮೇಲೆ ಒತ್ತಡ ಹೇರಿ, ಮೂತ್ರಕೋಶವನ್ನು ಮಾರಾಟ ಮಾಡುವಂತೆ ಮನವೊಲಿಸುತ್ತಿದ್ದಳು. ಕಿಡ್ನಿ ಮಾರಾಟ ಮಾಡಿದರೆ 10 ಲಕ್ಷ ರೂ. ಸಿಗುತ್ತದೆ. ಆ ಹಣವನ್ನು ಮಗಳ ಶಿಕ್ಷಣಕ್ಕೆ ಬಳಸಬಹುದು. ಮಗಳನ್ನು ಬೇರೆ ಉತ್ತಮ ಶಿಕ್ಷಣ, ಸೌಲಭ್ಯವಿರುವ ಶಾಲೆಗೆ ಸೇರಿಸಬಹುದು ಎಂದೆಲ್ಲ ಪುಸಲಾಯಿಸಿದ್ದಳು.
ಬಹಳಷ್ಟು ಯೋಚಿಸಿದ ಬಳಿಕ ಪತ್ನಿಯ ಮಾತಿಗೆ ಬೆಲೆಕೊಟ್ಟ ಪತಿ, ತನ್ನ ಕಿಡ್ನಿಯನ್ನು ಮಾರಾಟ ಮಾಡಲು ಒಪ್ಪಿಕೊಂಡಿದ್ದ. ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಿಡ್ನಿ ದಾನ ಮಾಡಿದ್ದ. ಅದರಂತೆ ಸಿಕ್ಕಿದ 10 ಲಕ್ಷ ರೂ.ಗಳನ್ನು ಮನೆಗೆ ತಂದಿಟ್ಟಿದ್ದ. ಹಣ ಮನೆಗೆ ಬರುತ್ತಿದ್ದಂತೆ, ಪತ್ನಿಯು ಪತಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಳು. ಆತ ಮಲಗಿದ್ದ ಸಮಯ ನೋಡಿಕೊಂಡು, ಮನೆಯಲ್ಲಿದ್ದ ಬೇರೆ ಹಣದೊಂದಿಗೆ ಆ 10 ಲಕ್ಷ ರೂ.ಗಳನ್ನು ಗಂಟು ಕಟ್ಟಿ ಪತ್ನಿ ಪರಾರಿಯಾಗಿದ್ದಳು.

ಪತಿ ಮತ್ತು ಆತನ ಕುಟುಂಬವು ಸ್ನೇಹಿತರ ಸಹಾಯದೊಂದಿಗೆ ಆಕೆಗಾಗಿ ಎಲ್ಲೆಡೆ ಹುಡುಕಾಟ ನಡೆಸಿತ್ತು. ಕೊನೆಗೊಂದು ದಿನ ಆಕೆ ಕೋಲ್ಕತ್ತಾದಲ್ಲಿರುವುದು ತಿಳಿದುಬಂತು. ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಆಕೆ ವಾಸಿಸುತ್ತಿರುವ ವಿಚಾರವೂ ಬಹಿರಂಗವಾಯಿತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪತಿ ಆರೋಪಿಸಿದ್ದಾನೆ.
ಬಳಿಕ ನಾನು, ನನ್ನ ಅಮ್ಮ ಮತ್ತು ಮಗಳು ಆಕೆಯ ಮನೆಗೆ ಹೋದಾಗ ಆಕೆ ನಮ್ಮೊಂದಿಗೆ ಮಾತನಾಡಲೇ ಇಲ್ಲ. ಅವಳ ಪ್ರಿಯಕರ ಮಾತನಾಡಿ, ಪತಿ, ಅತ್ತೆ-ಮಾವನ ಮೇಲೆ ಕಿರುಕುಳ ಆರೋಪ ಹೊರಿಸಿ, ಸದ್ಯದಲ್ಲೇ ಡೈವೋರ್ಸ್ ಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿದ ಎಂದೂ ಪತಿ ದೂರಿನಲ್ಲಿ ತಿಳಿಸಿದ್ದಾನೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.