ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿ ಹಲವು ದೇಶಗಳ ವಿರುದ್ಧ ಸುಂಕದ ಸಮರ ಸಾರಿರುವ ಕಾರಣ ಷೇರು ಮಾರುಕಟ್ಟೆಗಳು ತಲ್ಲಣಗೊಂಡಿವೆ. ಭಾರತದಲ್ಲಂತೂ ಮಾರುಕಟ್ಟೆಯು ಸತತವಾಗಿ ಕುಸಿತ ಕಾಣುತ್ತಿದ್ದು, ಹೂಡಿಕೆದಾರರ ಲಕ್ಷಾಂತರ ಕೋಟಿ ರೂ. ಸಂಪತ್ತು ಕರಗಿಹೋಗಿದೆ. ಇದರ ಬೆನ್ನಲ್ಲೇ, ಮ್ಯುಚುವಲ್ ಫಂಡ್ ಎಸ್ಐಪಿ ಹೂಡಿಕೆದಾರರು ಕೂಡ ಹೂಡಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ.
ಹೌದು, ಕಳೆದ ಮಾರ್ಚ್ ತಿಂಗಳಲ್ಲಿ 51 ಲಕ್ಷ ಮ್ಯುಚುವಲ್ ಫಂಡ್ ಎಸ್ಐಪಿಗಳನ್ನು ಜನ ಸ್ಥಗಿತಗೊಳಿಸಿದ್ದಾರೆ. ಮಾರುಕಟ್ಟೆ ಸತತವಾಗಿ ಕುಸಿತ ಕಾಣುತ್ತಿದ್ದು, ಹೂಡಿಕೆಯಿಂದ ನಷ್ಟವಾಗುತ್ತಿದೆ. ಹೆಚ್ಚಿನ ಹಣ ನಷ್ಟವಾಗುವ ಬದಲು ಹೂಡಿಕೆಯನ್ನೇ ನಿಲ್ಲಿಸುವುದು ಸೂಕ್ತ ಎಂದು ತಿಳಿದು ಹೂಡಿಕೆದಾರರು ಎಸ್ಐಪಿಗಳನ್ನು ಕ್ಲೋಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ತಿಂಗಳ ಎಸ್ಐಪಿ ಸ್ಥಗಿತದ ಅನುಪಾತವು ಶೇ.127.5ಕ್ಕೆ ಏರಿಕೆಯಾಗಿದೆ ಎಂದು ಎಎಂಎಫ್ಐ ಡೇಟಾ ವರದಿ ತಿಳಿಸಿದೆ.
ಕಳೆದ ತಿಂಗಳು 51 ಲಕ್ಷ ಮ್ಯುಚುವಲ್ ಫಂಡ್ ಎಸ್ಐಪಿಗಳನ್ನು ಸ್ಥಗಿತಗೊಳಿಸಿದ್ದರೆ, ಹೊಸದಾಗಿ 40 ಲಕ್ಷ ಎಸ್ಐಪಿಗಳನ್ನು ಆರಂಭಿಸಲಾಗಿದೆ. ಅಂದರೆ, 100 ಹೊಸ ಎಸ್ಐಪಿಗಳು ನೋಂದಣಿಯಾದರೆ, 127 ಎಸ್ಐಪಿಗಳು ಕ್ಲೋಸ್ ಆಗಿವೆ. ಕಳೆದ ಫೆಬ್ರವರಿಯಲ್ಲಿ ಎಸ್ಐಪಿ ಸ್ಟಾಪೇಜ್ ರೇಶಿಯೋ ಶೇ.122ರಷ್ಟು ಇದ್ದರೆ, ಜನವರಿಯಲ್ಲಿ ಶೇ.109ರಷ್ಟು ಇತ್ತು. ಮಾರ್ಚ್ ನಲ್ಲಿ ಅದು ಮತ್ತಷ್ಟು ಏರಿಕೆಯಾಗಿದೆ.
ಹೂಡಿಕೆ ಮೊತ್ತವೂ ಅಲ್ಪ ಕುಸಿತ
ಮ್ಯುಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆಯ ಹರಿವು ಕೂಡ ಅಲ್ಪ ಪ್ರಮಾಣದಲ್ಲಿ ಕುಸಿತವಾಗಿದೆ. ಫೆಬ್ರವರಿಯಲ್ಲಿ 25,999 ಕೋಟಿ ರೂಪಾಯಿಯನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡಲಾಗಿತ್ತು. ಆದರೆ, ಇದು ಮಾರ್ಚ್ ನಲ್ಲಿ 25,926 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ದೇಶದಲ್ಲಿ ಒಟ್ಟು 8.11 ಕೋಟಿ ಎಸ್ಐಪಿಗಳು ಇವೆ.