ಬೆಂಗಳೂರು: ಹಿಂದೂ ಸಂಸ್ಕೃತಿಯ ಪವಿತ್ರಹಬ್ಬ. ಹೊಸ ವರ್ಷದ ಆರಂಭವನ್ನು ಇಂದಿನಿಂದ ಭಾರತೀಯರು ಅನಾದಿ ಕಾಲದಿಂದಲೂ ಚರಿಸುತ್ತ ಬಂದಿದ್ದಾರೆ. ಹೀಗಾಗಿ ಇಂದು ಭಾರತೀಯರ ಮನೆ- ಮನಗಳಲ್ಲಿ ಯುಗಾದಿ (Ugadi festival) ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಹೊಸತೊಡಕು, ರಂಜಾನ್ ಹೀಗೆ ಸಾಲು ಸಾಲು ಹಬ್ಬದ ಸಂಭ್ರಮ ಈಗ ಎಲ್ಲೆಡೆ ಕಾಣುತ್ತಿದೆ. ಹೀಗಾಗಿ ಜನರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೂವು, ಹಣ್ಣು ಹಂಪಲು ದರ ಗಗನಮುಖಿಯಾಗಿದೆ. ಆದರೂ ಜನರು ಖರೀದಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಬೆಲೆ ಏರಿಕೆ ನಡುವೆಯೂ ಗ್ರಾಹಕರು ಮಾರುಕಟ್ಟೆಗೆ ದಾಂಗುಡಿಯಿಟ್ಟು ಖರೀದಿಸುತ್ತಿದ್ದಾರೆ. ಬೆಂಗಳೂರು (Bengaluru) ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಯೂ ಮಾವು ಮತ್ತು ಬೇವಿನ ಸೊಪ್ಪಿನ ರಾಶಿ ರಾಶಿಯೇ ಇಟ್ಟು ಮಾರಲಾಗುತ್ತಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಮಾರಾಟ ಭರ್ಜರಿಯಾಗುತ್ತಿದೆ. ಹಬ್ಬಕ್ಕೆ ಬೇಕಾದ ಮಾವು ಮತ್ತು ಬೇವಿನ ಸೊಪ್ಪು, ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ನಗರದ ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳಲ್ಲೂ ಖರೀದಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಎರಡು-ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ಮಲ್ಲಿಗೆ, ಗುಲಾಬಿ ಸೇರಿದಂತೆ ಕೆಲ ಹೂವಿನ ದರಗಳು ಕೊಂಚ ಏರಿಕೆಯಾಗಿವೆ.