ನ್ಯೂಯಾರ್ಕ್: “ಅಯ್ಯೋ ನನ್ನ ಬೆನ್ನು ತುರಿಸುತ್ತಿದೆ, ಸ್ವಲ್ಪ ಕೆರೀತಿಯಾ” ಎಂದು ನೀವು ಮನೆಯಲ್ಲಿ ನಿಮ್ಮ ಪತಿಯನ್ನೋ, ಪತ್ನಿಯನ್ನೋ, ಮಕ್ಕಳನ್ನೋ, ಅಕ್ಕ-ತಂಗಿಯರನ್ನೋ ಕೇಳುವುದು ಸಾಮಾನ್ಯ. ಆದರೆ, ಇದೇ ಬೆನ್ನು ಕೆರೆಯುವಿಕೆಯು ಈಗ ಅಮೆರಿಕದಂತಹ ದೇಶಗಳಲ್ಲಿ ‘ವೆಲ್‌ನೆಸ್ ಥೆರಪಿ’ ಆಗಿ ರೂಪಾಂತರಗೊಂಡು ದೊಡ್ಡ ವ್ಯಾಪಾರವಾಗುತ್ತಿದೆ. ಅಚ್ಚರಿಯ ಸಂಗತಿ ಏನೆಂದರೆ, ಜನರು ಈಗ ಮತ್ತೊಬ್ಬರ ಬೆನ್ನು ಕೆರೆದು ಗಂಟೆಗೆ 9,000ರೂ.ವರೆಗೆ ಸಂಪಾದಿಸುತ್ತಿದ್ದಾರೆ!
“ಸ್ಕ್ರ್ಯಾಚ್ ಥೆರಪಿ” ಎಂಬ ಹೊಸ ಟ್ರೆಂಡ್
ಇದು ಕೇಳಲು ಹಾಸ್ಯಾಸ್ಪದವಾಗಿದ್ದರೂ, ನಿಜವಾದ ಸೇವೆ. “ಪ್ರೊಫೆಷನಲ್ ಬ್ಯಾಕ್ ಸ್ಕ್ರ್ಯಾಚಿಂಗ್” ಅಥವಾ “ಸ್ಕ್ರ್ಯಾಚ್ ಥೆರಪಿ” ಎನ್ನುವ ಹೊಸ ಚಿಕಿತ್ಸಾ ವಿಧಾನ ಈಗ ಭಾರೀ ಟ್ರೆಂಡ್ ನಲ್ಲಿದೆ. ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಹಲವು ನಗರಗಳಲ್ಲಿ ತರಬೇತಿ ಪಡೆದ ತಜ್ಞರು ಸ್ಟುಡಿಯೊಗಳು ಮತ್ತು ಸ್ಪಾಗಳಲ್ಲಿ ಈ ಸೇವೆ ಒದಗಿಸುತ್ತಿದ್ದು, ಒಂದು ಗಂಟೆಯ ಸೆಷನ್‌ಗೆ 9,000 ರೂ. (ಸುಮಾರು 100–160 ಡಾಲರ್)ವರೆಗೆ ಶುಲ್ಕಕ್ಕೆ ಗ್ರಾಹಕರು ಬರುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ.

ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಸೌಮ್ಯವಾಗಿ ಕೆರೆಸಿಕೊಳ್ಳುವ ಕ್ರಿಯೆ ಸೌಮ್ಯ ನರಗಳನ್ನು ಉದ್ದೀಪನಗೊಳಿಸಿ ಮೆದುಳಿನ ಸಂತೋಷ ಹಾರ್ಮೋನ್‌ಗಳು ಅಂದರೆ ಎಂಡಾರ್ಫಿನ್ ಮತ್ತು ಸೆರಟೊನಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡ ಕಡಿಮೆ ಮಾಡುವುದರ ಜೊತೆಗೆ ಮನಸ್ಸಿಗೆ ತಾಜಾತನದ ಅನುಭವ ನೀಡುತ್ತದೆ. ಹೀಗಾಗಿ ಬೆನ್ನು ಕೆರೆಯುವಿಕೆಯು ಕೇವಲ ‘ಕೆರೆದು ಆರಾಮ’ ನೀಡುವುದಲ್ಲ, ನರಮಂಡಲವನ್ನು ಶಾಂತಗೊಳಿಸುವ ಚಿಕಿತ್ಸೆಯೂ ಹೌದು.
ಈ ಸೇವೆಗೆ ವಿಸ್ಪರ್ ವೇವ್, ಸ್ಕ್ರ್ಯಾಚರ್ ಗರ್ಲ್ಸ್ ಎಂಬೆಲ್ಲ ಆಕರ್ಷಕ ಹೆಸರುಗಳನ್ನೂ ನೀಡಲಾಗುತ್ತಿದೆ. ನಿಧಾನವಾದ ಉಗುರು ಸ್ಪರ್ಶ, ತಲೆ ಮತ್ತು ಕೈ ಸ್ಕ್ರ್ಯಾಚಿಂಗ್ ಮೂಲಕ ಮನಸ್ಸನ್ನು ಹಗುರಗೊಳಿಸುವ ಕೌಶಲ್ಯಗಳಲ್ಲಿ ಸಿಬ್ಬಂದಿ ತರಬೇತಿ ಪಡೆಯುತ್ತಾರೆ. ಸೆಷನ್‌ಗಳು 30 ರಿಂದ 90 ನಿಮಿಷಗಳವರೆಗೆ ನಡೆಯುತ್ತವೆ. ಈ ಕೆಲಸ ಮಾಡಲು ಇಚ್ಛಿಸುವವರಿಗೆ 20,000–21,000 ರೂ. ಒಳಗೆ ಆನ್‌ಲೈನ್ ತರಬೇತಿಗಳೂ ಲಭ್ಯವಿವೆಯ ಬಹುಮಂದಿ ಈ ಕೆಲಸವನ್ನು ಪಾರ್ಟ್ ಟೈಂ ಉದ್ಯೋಗವಾಗಿ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳು ಈ ಥೆರಪಿಗೆ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ | ರಾಷ್ಟ್ರ ಮಟ್ಟದಲ್ಲಿ ಎಷ್ಟನೇ ಸ್ಥಾನ ಗೊತ್ತಾ?



















