ನವದೆಹಲಿ: ಒಂದೋ ಹೂಡಿಕೆದಾರರಿಂದ ಪಡೆದ 25 ಕೋಟಿ ರೂ.ಗಳನ್ನು ಮೂರು ತಿಂಗಳೊಳಗೆ ಹಿಂತಿರುಗಿಸಿ ಇಲ್ಲವೇ ಜೈಲಿಗೆ ಹೋಗಿ… ಇದು ಚಿನ್ನದ ಹಗರಣ (Gold Scam) ಆರೋಪಿಯೊಬ್ಬರಿಗೆ ಸುಪ್ರೀ ಕೋರ್ಟ್ ಹಾಕಿರುವ ಷರತ್ತು. ಹೀರಾ ಗೋಲ್ಡ್ ಎಕ್ಸಿಮ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕರಾದ ನೊವೇರಾ ಶೇಖ್ ಅವರ ವಿರುದ್ಧ ಹೂಡಿಕೆದಾರರಿಗೆ 5,600 ಕೋಟಿ ರೂ.ಗಳನ್ನು ವಂಚಿಸಿದ ಆರೋಪವಿದೆ. ಹಲವಾರು ರಾಜ್ಯಗಳಲ್ಲಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಈ ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಅಲ್ಪ ಭಾಗವನ್ನು ಅಂದರೆ 25 ಕೋಟಿ ರೂ.ಗಳನ್ನು 90 ದಿನಗಳಲ್ಲಿ ಮರುಪಾವತಿ ಮಾಡದಿದ್ದರೆ ಆಕೆಯನ್ನು ವಶಕ್ಕೆ ಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಆದೇಶಿಸಿತು.
25 ಕೋಟಿ ರೂ.ಗಳನ್ನು ಪಾವತಿಸುವುದಾಗಿ ನೌಹೇರಾ ಹೇಳಿದ ಕಾರಣ, 2024ರ ನವೆಂಬರ್ 11ರಂದು ಆಕೆಯ ಶರಣಾಗತಿಗೆ ನೀಡಲಾಗಿದ್ದ ಗಡುವನ್ನು ಸುಪ್ರೀಂ ಕೋರ್ಟ್ ವಿಸ್ತರಣೆ ಮಾಡಿತ್ತು. ಆದರೂ, ನ್ಯಾಯಾಲಯದ ಸತತ ಆದೇಶಗಳ ಹೊರತಾಗಿಯೂ ಆಕೆಯ ನ್ಯಾಯಾಲಯದ ಮುಂದೆ ಬರದೇ ಆದೇಶ ಉಲ್ಲಂಘಿಸಿದ್ದಾಳೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: ತೊಡೆಯ ಭಾಗಕ್ಕೆ ಬಿಸ್ಕೆಟ್ ಅಂಟಿಸಿಕೊಂಡಿದ್ದ ನಟಿ
ಮೂರು ತಿಂಗಳ ಅವಧಿಯಲ್ಲಿ ಆರೋಪಿ ಶೇಖ್ ಅವರು 25 ಕೋಟಿ ರೂ.ಗಳನ್ನು ಠೇವಣಿ ಇಡಬೇಕು, ಇಲ್ಲದಿದ್ದರೆ ಅವರ ಜಾಮೀನು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ. ಕೂಡಲೇ ಅವರನ್ನು ಇಡಿ ಮತ್ತೆ ಜೈಲಿಗೆ ಕಳುಹಿಸಬಹುದು. ಇದು ಆರೋಪಿಗೆ ನಾವು ನೀಡುತ್ತಿರುವ ಕೊನೆಯ ಅವಕಾಶ ಎಂದು ನ್ಯಾಯಮೂರ್ತಿ ಪರ್ಡಿವಾಲಾ ಹೇಳಿದರು.
ಶೇಖ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಆರೋಪಿ ಬಳಿ ಹಣವಿಲ್ಲ ಎಂದು ವಾದಿಸಿದರು.
ಆಗ ಇ.ಡಿ., ಶೇಖ್ ಒಡೆತನದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಕುರಿತು ಉಲ್ಲೇಖಿಸಿತು. ಹೀಗಿದ್ದರೂ ಹರಾಜು ಮಾಡಬಹುದಾದ ನಿರ್ಬಂಧವಿಲ್ಲದ ಆಸ್ತಿಗಳ ಪಟ್ಟಿಯನ್ನು ನೀಡುವಂತೆ ನ್ಯಾಯಾಲಯ ಕೇಳಿದಾಗ ಕಪಿಲ್ ಸಿಬಲ್ ಅವರು ಅವುಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದೂ ಇ.ಡಿ. ನ್ಯಾಯಾಲಯಕ್ಕೆ ಅರಿಕೆ ಮಾಡಿತು.
ಹೀರಾ ಗೋಲ್ಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ಈ ಪ್ರಕರಣವನ್ನು ಗಂಭೀರ ವಂಚನೆಗಳ ತನಿಖಾ ಕಚೇರಿ (ಎಸ್ಎಫ್ಐಒ) ತನಿಖೆ ನಡೆಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.
ಚಿನ್ನಾಭರಣಗಳ ವ್ಯವಹಾರ ನಡೆಸುವ ಕಂಪನಿಯು ಹೂಡಿಕೆ ಮಾಡಿದ ಮೊತ್ತದ ಮೇಲೆ ಶೇಕಡಾ 36 ರಷ್ಟು ಲಾಭಾಂಶವನ್ನು ನೀಡುವ ಭರವಸೆಯನ್ನು ನೀಡಿತ್ತು. ಆರಂಭದಲ್ಲಿ, ಕಂಪನಿಯು ಹೂಡಿಕೆದಾರರಿಗೆ ಸರಿಯಾಗಿ ಲಾಭಾಂಶವನ್ನು ಪಾವತಿಸಿತ್ತು. ಆದರೆ 2018 ರಲ್ಲಿ ಕೆಲವು ಹೂಡಿಕೆದಾರರು ಕಂಪನಿ ಮತ್ತು ಶ್ರೀಮತಿ ಶೇಖ್ ಅವರು ವಂಚನೆ ಮಾಡಿರುವ ಬಗ್ಗೆ ದೂರುಗಳನ್ನು ದಾಖಲಿಸಿದರು. ಕೊನೆಗೆ 2018ರ ಅಕ್ಟೋಬರ್ ನಲ್ಲಿ ಆಕೆಯನ್ನು ಬಂಧಿಸಲಾಯಿತು.