ಬೆಂಗಳೂರು: ನನಗೆ ಮಗಳಿದ್ದಾಳೆ. ಹೈಕೋರ್ಟ್ ನೀಡಿದ ಜಾಮೀನು ರದ್ದು ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದು ಮಾಡುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈಗ ತೀರ್ಪನ್ನು ಕಾಯ್ದಿರಿಸಿದೆ.
ಜುಲೈ 24 ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ನ್ಯಾಯಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.
ಪವಿತ್ರಾ ಗೌಡ ವಾದ ಏನು?
ನಾನು ರೇಣುಕಾಸ್ವಾಮಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಘಟನೆ ನಡೆದ ದಿನ ಇತರೇ ಆರೋಪಿಗಳ ಜೊತೆ ಯಾವುದೇ ಸಂವಹನ ನಡೆಸಿಲ್ಲ. ರೇಣುಕಾಸ್ವಾಮಿಯ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದೇನೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ರೇಣುಕಾ ಸ್ವಾಮಿ ಕೊಲೆಗೂ ನನಗೂ ಯಾವುದೇ ಸಂಬಂಧ ಇಲ್ಲ.
ರೇಣುಕಾ ಸ್ವಾಮಿಯ ಮೃತ ದೇಹದ ಮೇಲಿನ ಗಾಯಗಳು ನನ್ನಿಂದ ಆಗಿಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ನಾನು ಒಬ್ಬಂಟಿ ಪೋಷಕಳಾಗಿದ್ದು ನನಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳಬೇಕಿದೆ. ಅಷ್ಟೇ ಅಲ್ಲದೇ ವಯಸ್ಸಾದ ಪೋಷಕರು ಇದ್ದು, ಅವರಿಗೆ ನಾನೇ ಆಧಾರವಾಗಿದ್ದೇನೆ.
ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ನನ್ನ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಲಿಖಿತವಾಗಿ ನೀಡಿಲ್ಲ. ಮಹಿಳೆಯಾಗಿರುವುದರಿಂದ ಜಾಮೀನು ರದ್ದು ಮಾಡಬಾರದು ಎಂದು ಮನವಿ ಮಾಡುತ್ತಿದ್ದೇನೆ.


















