ನವದೆಹಲಿ/ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ 2 ದಿನಗಳು ಬಾಕಿ ಇರುವಂತೆಯೇ ಕಾಂಗ್ರೆಸ್-ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನ್ನಿಕಿ ಭುಯಾನ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ, ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ ಅವರ ದೆಹಲಿ ನಿವಾಸಕ್ಕೆ ಮಂಗಳವಾರ ಅಸ್ಸಾಂ ಮತ್ತು ದೆಹಲಿ ಪೊಲೀಸರ ಜಂಟಿ ತಂಡ ಭೇಟಿ ನೀಡಿದೆ. ರಿನ್ನಿಕಿ ವಿರುದ್ಧ ಕಾಂಗ್ರೆಸ್ ಮಾಡಿರುವ ವಿದೇಶಿ ಪಾಸ್‌ಪೋರ್ಟ್ ಮತ್ತು ಅಕ್ರಮ ಆಸ್ತಿ ಹಸ್ತಕ್ಷೇಪದ ಆರೋಪಗಳು ಈಗ ಕಾನೂನು ಸಮರಕ್ಕೆ ನಾಂದಿ ಹಾಡಿವೆ.
ವಿವಾದದ ಕಿಡಿ ಹಚ್ಚಿದ ಪಾಸ್‌ಪೋರ್ಟ್
ಇತ್ತೀಚೆಗೆ ಪವನ್ ಖೇರಾ ಅವರು ಪತ್ರಿಕಾಗೋಷ್ಠಿ ನಡೆಸಿ, ರಿನ್ನಿಕಿ ಭುಯಾನ್ ಶರ್ಮಾ ಅವರು ಯುಎಇ, ಈಜಿಪ್ಟ್ ಮತ್ತು ಆಂಟಿಗುವಾ ದೇಶಗಳ ಮೂರು ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಭಾರತೀಯ ಕಾನೂನಿನ ಪ್ರಕಾರ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿರುವಾಗ, ಅವರು ಭಾರತೀಯ ಪಾಸ್‌ಪೋರ್ಟ್ ಜೊತೆಗೆ ಇವುಗಳನ್ನು ಹೇಗೆ ಹೊಂದಿದ್ದಾರೆ? ದುಬೈ ಮತ್ತು ಅಮೆರಿಕದ ವ್ಯೋಮಿಂಗ್‌ನಲ್ಲಿ ಅವರು ಆಸ್ತಿ ಹೊಂದಿದ್ದಾರೆಯೇ ಎಂದು ಖೇರಾ ಪ್ರಶ್ನಿಸಿದ್ದರು.
ಇದರ ಬೆನ್ನಲ್ಲೇ ರಿನ್ನಿಕಿ ಅವರು ಖೇರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದರಂತೆ ಮಂಗಳವಾರ ಪೊಲೀಸರು ಖೇರಾ ಅವರ ನಿವಾಸಕ್ಕೆ ತೆರಳಿದ್ದಾರೆ. ಆದರೆ ಆಗ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ನಾಯಕರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಎಂ ಹಿಮಂತ ಬಿಸ್ವ ಶರ್ಮಾ, “ಪವನ್ ಖೇರಾ ಅವರು ಬಳಸಿರುವ ಎಲ್ಲಾ ದಾಖಲೆಗಳು ನಕಲಿ. ಇವುಗಳನ್ನು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಗ್ರೂಪ್‌ಗಳು ಪೂರೈಸಿವೆ” ಎಂದು ಬಾಂಬ್ ಸಿಡಿಸಿದ್ದಾರೆ.
ಕಳೆದ 10 ದಿನಗಳಲ್ಲಿ ಪಾಕಿಸ್ತಾನಿ ಚಾನೆಲ್‌ಗಳು ಅಸ್ಸಾಂ ಚುನಾವಣೆ ಬಗ್ಗೆ 11 ಕಾರ್ಯಕ್ರಮಗಳನ್ನು ಮಾಡಿವೆ, ಇದರ ಹಿಂದೆ ದೊಡ್ಡ ಸಂಚಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳನ್ನು ಬಳಸಿ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ನನ್ನ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ: ರಿನ್ನಿಕಿ ಅಳಲು
ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ರಿನ್ನಿಕಿ ಭುಯಾನ್ ಶರ್ಮಾ, “ಒಬ್ಬ ವ್ಯಕ್ತಿ ಮೂರು ಪಾಸ್‌ಪೋರ್ಟ್ ಹೊಂದಲು ಹೇಗೆ ಸಾಧ್ಯ? ಇದೆಲ್ಲವೂ ಎಐ (AI) ಸೃಷ್ಟಿತ ನಕಲಿ ದಾಖಲೆಗಳು. ಕಳೆದ ಎರಡು ವರ್ಷಗಳಿಂದ ರಾಜಕೀಯಕ್ಕೆ ಸಂಬಂಧವಿಲ್ಲದ ನನ್ನನ್ನು ಮತ್ತು ನನ್ನ ಮಕ್ಕಳನ್ನು ಅನಗತ್ಯವಾಗಿ ಎಳೆದು ತಂದು ಅಪಮಾನ ಮಾಡಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದುಬೈನಲ್ಲಿ ಆಸ್ತಿ ಇದೆ ಎನ್ನುವವರು ಹೋಟೆಲ್ ರೂಮ್ ನಂಬರ್ ನೀಡುತ್ತಿದ್ದಾರೆ, ಅದು ಆಸ್ತಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಘರ್ಷಕ್ಕೆ ಹೊಸ ತಿರುವು ನೀಡಿದ ಗೌರವ್ ಗೊಗೊಯ್
ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಈ ವಿವಾದಕ್ಕೆ ಹೊಸ ತಿರುವು ನೀಡಿದ್ದು, “ನನಗೆ ಲಂಡನ್‌ನಲ್ಲಿ ಆಸ್ತಿ ಇಲ್ಲ ಎಂದು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಹೇಳಬಲ್ಲೆ, ಹಿಮಂತ ಬಿಸ್ವ ಶರ್ಮಾ ಅವರು ಅದೇ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ?” ಎಂದು ಸವಾಲು ಹಾಕಿದ್ದಾರೆ. ಸಿಎಂ ಕುಟುಂಬವು ದುಬೈ ಗೋಲ್ಡನ್ ವೀಸಾ ಹೊಂದಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ವೈಯಕ್ತಿಕ ಟೀಕೆಗಳು ಮತ್ತು ಪೊಲೀಸ್ ಕಾರ್ಯಾಚರಣೆಗಳು ಅಸ್ಸಾಂ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವುದಂತೂ ನಿಜ.
ಇದನ್ನೂ ಓದಿ : ಪಾಂಡ್ಯ ಸಂಪೂರ್ಣ ಫಿಟ್.. RR ವಿರುದ್ಧದ ಕದನಕ್ಕೆ ಮೈದಾನಕ್ಕಿಳಿಯಲು ಸಜ್ಜು!



















