ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು. ಈಗ ಮತ್ತೆ ಪ್ರಯಾಣಿಕರು ಮೆಟ್ರೋದತ್ತ ಹೋಗುತ್ತಿದ್ದಾರೆ.
ಏ. 17ರಂದು ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ ದಾಖಲೆಯನ್ನು ಕಂಡಿದೆ. ಮೆಟ್ರೋ ಟಿಕೆಟ್ ದರ ದುಪ್ಪಟ್ಟು ಹೆಚ್ಚಾದ ಹೊರತಾಗಿಯೂ ದಾಖಲೆಯ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡಿದ್ದಾರೆ. ಏ. 17ರಂದು ಒಟ್ಟು 9,08,153 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತ ಲಕ್ಷಾಂತರ ಬೆಂಗಳೂರಿಗರು ಈಗ ಮತ್ತೆ ಮೆಟ್ರೋದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗ ಬಿಎಂಆರ್ಸಿಎಲ್ ದತ್ತಾಂಶ ಬಿಡುಡೆ ಮಾಡಿದೆ. ಲೈನ್ 1 (ಪರ್ಪಲ್ ಲೈನ್) ರಲ್ಲಿ 4,35,516 ಮಂದಿ ಪ್ರಯಾಣಿಸಿದ್ದಾರೆ. ಲೈನ್ 2 (ಗ್ರೀನ್ ಲೈನ್) ರಲ್ಲಿ 2,85,240 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಲ್ಲಿ 1,87,397 ಪ್ರಯಾಣಿಕರು ಮಾರ್ಗ ಬದಲಾಯಿಸಿದ್ದಾರೆ.
2025 ರ ಫೆಬ್ರವರಿಯಲ್ಲಿ ಬಿಎಂಆರ್ಸಿಎಲ್ ಪ್ರಯಾಣ ದರ ಹೆಚ್ಚಿಸಿತ್ತು. ಗರಿಷ್ಠ ಟಿಕೆಟ್ ಬೆಲೆಯನ್ನು 60 ರೂ. ನಿಂದ 90 ರೂ. ಗೆ ಹೆಚ್ಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ 50 ರೂ.ನಿಂದ 90 ರೂ.ಗೆ ಹೆಚ್ಚಿಸಲಾಗಿತ್ತು. ಶೇ. 50–90 ರ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಂತರದ ಕೆಲವು ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು.