ಬೆಂಗಳೂರು: ಮಲಯಾಳಂ ಸಿನಿ ರಂಗದಲ್ಲಿ ಹೇಮಾ ಸಮಿತಿ ವರದಿಯ ನಂತರ ಚಂದನವನದಲ್ಲಿ ಕೂಡ ಸಮಿತಿ ರಚಿಸುವಂತೆ ಆಗ್ರಹ ಕೇಳಿ ಬಂದಿತ್ತು.
ಮಲಯಾಳಂ ಸಮಿತಿಯ ವರದಿಯ ನಂತರ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ಬಗ್ಗೆ ಧ್ವನಿ ಎತ್ತಲಾಗಿತ್ತು. ಹೀಗಾಗಿ ರಾಜ್ಯ ಮಹಿಳಾ ಆಯೋಗವು ಸೋಮವಾರ ಚಲನಚಿತ್ರ ವಾಣಿಜ್ಯ ಮಂಡಳಿ (Kannada Film Industry)ಯಲ್ಲಿ ಸಭೆ ಕರೆದಿತ್ತು.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಸಾ.ರಾ.ಗೋವಿಂದು, ರಾಕ್ ಲೈನ್ ವೆಂಕಟೇಶ್, ತಾರಾ ಅನುರಾಧಾ, ಭಾವನಾ ರಾಮಣ್ಣ, ನೀತೂ ಶೆಟ್ಟಿ, ಸಂಜನಾ ಗಲ್ರಾನಿ ಸೇರಿದಂತೆ ಹಲವಾರು ನಟಿಯರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ- ತಾಯಿ ಸುಲಭದಲ್ಲಿ ಕಳುಹಿಸಬೇಕು. ಚಿತ್ರರಂಗದಲ್ಲಿ ಆ ರೀತಿಯ ಶುದ್ಧ ವಾತಾವರಣವಿರಬೇಕು. ಕೆಲವರು ಭಯದಿಂದ ಮಕ್ಕಳನ್ನು ಈ ರಂಗದತ್ತ ಕಳುಹಿಸುತ್ತಿಲ್ಲ. ಕೆಲವೇ ಕೆಲವರು ಮಾತ್ರ ಈ ರಂಗದತ್ತ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಅದಕ್ಕಾಗಿ ‘ಕನ್ನಡ ಚಿತ್ರರಂಗದಲ್ಲಿ ಪಾಶ್ (POSH- ಪ್ರಿವೆನ್ಶನ್ ಆಫ್ ಸೆಕ್ಸುವಲ್ ಹರಾಸ್ಮೆಂಟ್) (ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಸಮಿತಿ) ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
‘ಪಾಶ್ ಕಮಿಟಿ ಹೇಗಿರಬೇಕು ಎನ್ನುವ ಕುರಿತು ಕಾನೂನು ಇದೆ. ಅದೇ ರೀತಿ ಸಮಿತಿ ರಚನೆ ಆಗಲಿದೆ. ನಟಿಯರಿಗೆ ನೀಡುವ ಸೌಲಭ್ಯಗಳ ಕುರಿತು ಉಲ್ಲೇಖವಿರುತ್ತದೆ. ಸರ್ಕಾರದ ಗೆಜೆಟ್ ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ರಕ್ಷಣೆ ನೀಡುವ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಬೇಕು. ಹೀಗಾಗಿ ರಚನೆ ಮಾಡುತ್ತಿದ್ದೇವೆ. ಈ ಸಮಿತಿಗೆ ಹಿರಿಯ ನಟಿ ಅಧ್ಯಕ್ಷರಾಗಿರಬೇಕು. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು. ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.