ಯಾರ ವಿರೋಧ, ಮಾತಿಗೂ ಜಗ್ಗದ-ಬಗ್ಗದ ಸಿದ್ದರಾಮಯ್ಯರನ್ನು ಒಂದು ಕ್ಷಣ ಮುಡಾ ಅಲುಗಾಡಿಸಿ ಬಿಟ್ಟಿತ್ತು. ರಾಜಕೀಯ ಪ್ರೇರಿತ ಮುಡಾ ಎಂದು ಅಂದು ಸಿದ್ದು ವಾದಿಸಿದ್ದನ್ನು ಕೋರ್ಟ್ ಇಂದು ಪುನರುಚ್ಛರಿಸಿರುವುದು ಸಿದ್ದುಗೆ ಬಲ ನೀಡಿದೆ. ಇಡಿಗೆ ತಪರಾಕಿ, ಬಿಜೆಪಿಗೆ ಶಾಕ್ ಎನ್ನುವಂತಾಗಿದೆ. ಈ ಕುರಿತಾದ ಒಂದು ಸ್ಟೋರಿ ನಿಮ್ಮ ಮುಂದೆ..
ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗೆ ಇಡಿ ನೀಡಿದ್ದ ಸಮನ್ಸ್ ನ್ನು ವಜಾಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಇಡಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠದಲ್ಲಿ ವಿಚಾರಣೆ ನಡೆದಿದ್ದು, ಇಡಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಹೋರಾಟ ಚುನಾವಣೆಯಲ್ಲಿ ನಡೆಯಲಿ. ಇಲ್ಲಿ ಬೇಡ. ಇಡಿಯನ್ನು ರಾಜಕೀಯವಾಗಿ ಯಾಕೆ ಬಳಸಿಕೊಳ್ಳಬೇಕು? ದುರಾದೃಷ್ಟವಶಾತ್ ಮಹಾರಾಷ್ಟ್ರದಲ್ಲಿ ನನಗೆ ಅನುಭವಗಳಾಗಿವೆ. ನಾನು ಬಾಯಿ ತೆರೆಯುವಂತೆ ಮಾಡಬೇಡಿ ಎಂದು ಸಿಜೆಐ ಕಟುವಾಗಿ ಟೀಕಿಸಿದ್ದಾರೆ. ಈ ಮೂಲಕ ಸಿದ್ದು ವಿರೋಧಿಗಳಿಗೆ ಹಾಗೂ ಇಡಿಗೆ ಕೋರ್ಟ್ ತಪರಾಕಿ ನೀಡಿದ್ದು, ಸಿದ್ದುಗೆ ಆನೆ ಬಲ ನೀಡಿದಂತಾಗಿದೆ.