ಉಡುಪಿ: ಪರಶುರಾಮ ಥೀಮ್ ಪಾರ್ಕ್ನಲ್ಲಿ ಮೇಲ್ಛಾವಣಿಗೆ ಹಾಕಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಸುನಿಲ್ ಕುಮಾರ್ ಅವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ, ಇದೊಂದು ವ್ಯವಸ್ಥಿತ ಸಂಚು, ಬೆಲೆಬಾಳುವ ವಸ್ತುಗಳಿದ್ದರೂ, ತಗಡು ಕದ್ದಿರುವುದು ಅನುಮಾನ ಮೂಡಿಸುತ್ತಾ ಇದೆ ಎಂದು ಆರೋಪಿಸಿದ್ದಾರೆ.
2.5 ವರ್ಷದ ನಂತರ ಪಾರ್ಕ್ಗೆ ಕಾಲಿಟ್ಟಿದ್ದ ಶಾಸಕ ಸುನಿಲ್ ಕುಮಾರ್ ಪಾಳುಬಿದ್ದ ಪಾರ್ಕ್ ನೋಡಿ ವಿಷಾದ ವ್ಯಕ್ತಪಡಿಸಿ, ಈ ಪರಿಸ್ಥಿತಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದರು.
ಇದೀಗ ಉದಯ್ ಕುಮಾರ್ ಶೆಟ್ಟಿ ಈ ಬಗ್ಗೆ ಮಾತನಾಡಿ, ಪಾರ್ಕ್ನ ಈ ಪರಿಸ್ಥಿತಿಗೆ ನೇರ ಕಾರಣ ಸುನಿಲ್ ಕುಮಾರ್ ಎಂದು ವಾಗ್ದಾಳಿ ನೆಡೆಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ನ ಆಡಿಟೋರಿಯಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳಿದ್ದವು. ಕಳ್ಳರು ನಿಜವಾಗಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದರೆ ಅಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಆದರೆ, ಅಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆಯದೆ ರಸ್ತೆಗೆ ಕಾಣುವ ಮೇಲ್ಛಾವಣಿಯ ಮೂವತ್ತು ಪೀಸ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಇದೊಂದು ಕಳ್ಳತನ ಮಾಡಿಸಿರುವ ಪ್ರಕರಣದಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಾರ್ಕ್ನ್ನು ಸ್ವಚ್ಛತೆ ಮಾಡುತ್ತೇನೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ, ಪಾಪ ಪ್ರಾಯಶ್ಚಿತ ಮಾಡಿಕೊಳ್ಳಲು ಈ ಕೆಲಸವನ್ನು ಮಾಡಲೇ ಬೇಕು ಎಂದು ಸುನೀಲ್ ಕುಮಾರ್ ವಿರುದ್ಧ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಭೆ ಕೇಸ್ | ವರ್ತಿಕಾ ಕಟಿಯಾರ್ ವರ್ಗಾವಣೆ.. ನೂತನ ಐಜಿಪಿಯಾಗಿ ಡಾ.ಹರ್ಷ, SP ಆಗಿ ಡಾ.ಸುಮನ್ ಪನ್ನೇಕರ್ ನೇಮಕ



















