ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೈಲೂರಿನ ಉಮ್ಮಿಕ್ಕಲಗ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಅವರು ಜು. 25ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿಯಲ್ಲಿ ವಿವಾದಿತ ಪರಶುರಾಮ ಪ್ರತಿಮೆಯನ್ನು ಪುನರ್ ರಚಿಸಿ, ಪುನರ್ ಸ್ಥಾಪಿಸುವಂತೆ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಧಿಕಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರು ಹಾಗೂ ಮಲ್ನಾಡ್ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಅಲ್ಲದೆ, ರಿಟ್ ಅರ್ಜಿ ವಿಚಾರಣೆಯಾಗುವವರೆಗೆ ವಿವಾದಿತ ಪರಶುರಾಮನ ಮೂರ್ತಿಯ ಬಿಡಿಭಾಗಗಳನ್ನು ಸಂರಕ್ಷಿಸುವಂತೆ ಸೂಕ್ತ ಆದೇಶ ನೀಡುವಂತೆ ಅರ್ಜಿಯಲ್ಲಿ ತಿಳಿಸಿದ್ದಾರೆ.
ಹೊಸ ಟೆಂಡರ್ ಕರೆದು ಶೀಘ್ರದಲ್ಲೇ ಪರಶುರಾಮ ಥೀಂ ಪಾರ್ಕ್ ಕಾರ್ಯ ಪೂರ್ಣಗೊಳಿಸುವಂತೆ, ಪ್ರತಿಮೆಯನ್ನು ಪುನರ್ ರಚಿಸಿ ಸ್ಥಾಪಿಸುವಂತೆ ಅವರು ಅರ್ಜಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆಯಷ್ಟೇ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷರೋಪ ಪಟ್ಟಿಯಲ್ಲಿ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಹೇಳಲಾಗಿತ್ತು. ಇದೀಗ ಮೂರ್ತಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಉದಯ್ ಶೆಟ್ಟಿ ಮುನಿಯಾಲು ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
“ಸುನೀಲ್ ಕುಮಾರ್ ರ ಕೆಟ್ಟ ಕನಸಿಗೆ ಬಲಿಯಾದ ಕಾರ್ಕಳ́ ”
ನನ್ನ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ತನಿಖೆಯ ಹಂತದಲ್ಲಿದೆ ಎಂದರೆ ಕೋರ್ಟ್ ಆದೇಶಿಸುವುದಿಲ್ಲ. ಶಾಸಕ ಸುನೀಲ್ ಕುಮಾರ್ ಕಾರ್ಕಳ ಅವರ ಕೆಟ್ಟ ಕನಸಿಗೆ ಕಾರ್ಕಳ ಬಲಿಯಾಗಿದೆ. ರಿಟ್ ಅರ್ಜಿ ಸಲ್ಲಿಸಿದ್ದೇನೆ. ಕೋರ್ಟ್ ತೀರ್ಮಾನ ಮಾಡುತ್ತದೆ.
-ಉದಯ್ ಕುಮಾರ್ ಶೆಟ್ಟಿ, ಮುನಿಯಾಲು
ಕಾಂಗ್ರೆಸ್ ಮುಖಂಡ
“ತನಿಖೆ ಪೂರ್ಣಗೊಳ್ಳುವವರೆಗೆ ಕಾಮಗಾರಿಗೆ ಆದೇಶಿಸಬಾರದು”
ಜನರ ತೆರಿಗೆ ಹಣ ಲೂಟಿಯಾಗಿದೆ. ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ತುಳುನಾಡ ಅಸ್ಮಿತೆಯಾಗಿರುವ ಪರಶುರಾಮರ ಘನತೆಗೆ ಧಕ್ಕೆಯಾಗಿದೆ. ಇದನ್ನೆಲ್ಲಾ ಮಾಡಿರುವ ಅಧಿಕಾರಿಗಳು, ಜಿಲ್ಲಾಡಳಿತ, ಶಿಲ್ಪಿ, ಜನಪ್ರತಿನಿಧಿಗಳ ಮೇಲೆ ನಿಷ್ಪಕ್ಷವಾದ ತನಿಖೆ ನಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವವರೆಗೂ ಯಾವುದೇ ಕಾಮಗಾರಿ ನಡೆಯಬಾರದು. ಇಲ್ಲಿ ಯಾವ ಪಕ್ಷಕ್ಕೂ ರಾಜಕೀಯಕ್ಕಾಗಿ ದೇವರನ್ನು, ಜನರ ಹಣವನ್ನು ಲೂಟಿಮಾಡಲು ನಾವು ಬಿಡುವುದಿಲ್ಲ. ಈಗಾಗಲೇ ಲೋಕಾಯುಕ್ತ ತನಿಖೆ ಕೂಡ ಪ್ರಗತಿಯಲ್ಲಿರುವುದರಿಂದ ಯಾವುದೇ ರೀತಿಯ ಕಾಮಗಾರಿಗೆ ಜಿಲ್ಲಾಧಿಕಾರಿಯವರು ಆದೇಶ ನೀಡಬಾರದು.
-ದಿವ್ಯ ನಾಯಕ್
ಸಾಮಾಜಿಕ ಹೋರಾಟಗಾರ್ತಿ