ಕೊಪ್ಪಳ: ಹೃದಯಾಘಾತಕ್ಕೆ ಬಲಿಯಾಗಿರುವ ಪಿಎಸ್ ಐ ಪರಶುರಾಮ್ ಬಡತನದಲ್ಲೇ ಒಂದಲ್ಲ, 8 ಉದ್ಯೋಗ ಗಿಟ್ಟಿಸಿಕೊಂಡಿದ್ದರು ಎನ್ನಲಾಗಿದೆ.
ಮೂಲತ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪಿಎಸ್ ಐ ಪರಶುರಾಮ(Parashuram) ಯಾದಗಿರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಆದರೆ, ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರನೇ ಕಾರಣ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಕಡುಬಡತನದಲ್ಲಿ ಹುಟ್ಟಿದ್ದ ಪರಶುರಾಮ ಹಗಲಿರುಳು ಓದಿ ಪಿಎಸ್ ಐ ಆಗಿದ್ದರು.
ಮೃತ ಪರಶುರಾಮ ಅವರ ಹೆತ್ತವರು ಗ್ರಾಮದಲ್ಲಿ ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು. ಕಡುಬಡತನದಲ್ಲಿ ಬೆಳದಿದ್ದ ಪರಶುರಾಮ, ಧಾರವಾಡ ಕೆಸಿಡಿ ಕಾಲೇಜಿನಲ್ಲಿ ಡಿಗ್ರಿ ಓದಿದ್ದಾರೆ. ಪದವಿ ಓದುತ್ತಿದ್ದಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ಅವರು, ಡಿಗ್ರಿ ಮುಗಿಯುತ್ತಲೇ ಜೈಲ್ ವಾರ್ಡನ್ ಆಗಿ ಸರ್ಕಾರಿ ನೌಕರಿ ಪಡೆದಿದ್ದರು. ನಂತರ ಐದು ವರ್ಷಗಳ ಕಾಲ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡಿದ್ದಾರೆ. ಆನಂತರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು ವರ್ಷ ಎಫ್ ಡಿಎ ಆಗಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಟ್ರಾಫಿಕ್ ಇನಸ್ಪೆಕ್ಟರ್, ಪಿಡಿಓ ಸೇರಿದಂತೆ ಇನ್ನು ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಆದರೆ, ಪಿಎಸ್ಐ ಆಗಬೇಕು ಎಂದು ಕನಸು ಕಂಡಿದ್ದ ಪರಶುರಾಮ, ಕೆಲಸ ಮಾಡುತ್ತಿದ್ದಾಗಲೇ ಪಿಎಸ್ ಐ ಪರೀಕ್ಷೆಗೆ ತಯಾರಿ ಕೂಡ ನಡೆಸಿ, ಯಶಸ್ವಿಯಾಗಿದ್ದರು.
ಬೆಳಿಗ್ಗೆ ಕೆಲಸ ಮಾಡಿಕೊಂಡು ಬಂದು ಸಂಜೆ ವೇಳೆ ಪಿಎಸ್ ಐ ಪರೀಕ್ಷೆಗೆ ಅಧ್ಯಯನ ನಡೆಸುತ್ತಿದ್ದರು. ಹಗಲಿರುಳು ಕಠೀಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದ ಅವರು, 2017 ರಲ್ಲಿ ಪಿಎಸ್ ಐ ಆಗಿ ಆಯ್ಕೆಯಾಗಿದ್ದರು. ಆದರೆ, ಈಗ ಹೃದಯಾಘಾತಕ್ಕೆ ಬಲಿಯಾಗಿದ್ದು, ಕುಟುಂಬಸ್ಥರು ಶಾಸಕರೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.