ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ ಗೆ (Actor Darshan) ರಾಜಾತಿಥ್ಯ ನೀಡಿರುವ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರ ಕೂಡ ಗರಂ ಆಗಿತ್ತು. ಹೀಗಾಗಿ ಹಲವಾರು ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಜೈಲು ಸಿಬ್ಬಂದಿ ತನಿಖೆ ನಡೆಸಿದ್ದಾರೆ.
ಜೈಲಿನಲ್ಲಿ ಕೆಎಸ್ ಐಎಸ್ ಎಫ್ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕೇಂದ್ರ ಕಾರಾಗೃಹ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಜೈಲಿನ ಸುಮಾರು 100ಕ್ಕೂ ಅಧಿಕ ಜೈಲಾಧಿಕಾರಿಗಳು, ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.
ದರ್ಶನ್ ರಾಜಾತಿಥ್ಯ ವಿಚಾರವಲ್ಲದೇ, ಯಾವುದೇ ಅವ್ಯವಹಾರ ಬಯಲಿಗೆ ಬಂದರೂ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪ್ರತಿಭಟಿಸಿದ್ದಾರೆ. ಕೇವಲ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಮಾಧ್ಯಮಗಳಲ್ಲೂ ಜೈಲು ಸಿಬ್ಬಂದಿ ಬಗ್ಗೆ ಮಾತ್ರ ಸುದ್ದಿಯಾಗುತ್ತಿದೆ. ಜೈಲಿಗೆ ಒಂದು ಇರುವೆ ಬರಬೇಕಾದರೂ ಕರ್ನಾಟಕ ಕೈಗಾರಿಕಾ ಭದ್ರತಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜೈಲಿನ ಸಿಬ್ಬಂದಿಯ ಶೂ, ಬೆಲ್ಟ್ ತೆಗೆಸಿದರೂ ಕೆಎಸ್ ಐಎಸ್ ಎಫ್ (KSISF) ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.
ಹೀಗಿದ್ದರೂ ಜೈಲಿನಲ್ಲಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಹೇಗೆ ಬರುತ್ತವೆ? ಅವರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ಆದರೆ, ಜೈಲಿನ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟಿಸಿದ್ದಾರೆ.