ಬೆಂಗಳೂರು : ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಚಿವ ಪರಮೇಶ್ವರ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಸತೀಶ್ ಜಾರಕಿಹೊಳಿಯವರು ಹಿಂದೆ ಅಹಿಂದ ಚಳುವಳಿಯಲ್ಲಿದ್ದರು. ಅವರಿಗೆ ಆ ಬದ್ಧತೆ ಇದೆ ಎಂದು ಹೇಳಿರಬಹುದು. ಸಿಎಂ ಹುದ್ದೆಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಅವರು ಹೇಳಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸಿಎಂ ರೇಸ್ನಲ್ಲಿ ತಮ್ಮ ಹೆಸರಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದಾದರೂ ರೇಸ್ ಇರಲಿ, ಹೈಕಮಾಂಡ್ ನಿರ್ಧಾರವೇ ಅಂತಿಮ. ಆ ಸಂದರ್ಭ ಬಂದಾಗ ಸಿಎಲ್ಪಿ ಸಭೆ ಕರೆಯುತ್ತಾರೆ. ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ವೀಕ್ಷಕರು ಹೈಕಮಾಂಡ್ ಗೆ ವರದಿ ಕೊಟ್ಟು ನಂತರ ಘೋಷಣೆ ಆಗುತ್ತದೆ. ಇದು ಪದ್ಧತಿ. ಇದನ್ನು ಶಾರ್ಟ್ ಕಟ್ ಹೇಗೆ ಮಾಡುತ್ತಾರೆ ಹೇಳಿ ಎಂದು ಪ್ರಶ್ನಿಸಿದರು. ಇದೇ ವೇಳೆ ನಾನು, ಸತೀಶ್, ಮಹಾದೇವಪ್ಪ ಕಾಫಿಗೆ ಸೇರಿದ್ದೆವು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.