ಪ್ಯಾರಿಸ್: ಪ್ಯಾರಾಲಿಂಪಿಕ್ಸ್(Paris Paralympics) ಕ್ರೀಡಾಕೂಟಕ್ಕೆ ನಾಳೆಯಿಂದ ಚಾಲನೆ ಚಾಲನೆ ಸಿಗಲಿದೆ. ಈ ಬಾರಿ ಭಾರತದಿಂದ ದಾಖಲೆಯ 84 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಳೆದ ಟೋಕಿಯೊದಲ್ಲಿ 19 ಪದಕ ಗೆದ್ದಿದ್ದ ಭಾರತ ಈ ಬಾರಿ 25 ಪದಕದ ಗುರಿಯೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಬ್ಲೈಂಡ್ ಜುಡೊ, ಪವರ್ ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಸೇರಿದಂತೆ 12 ಕ್ರೀಡೆಗಳಲ್ಲಿ ಭಾರತೀಯ ಆಟಗಾರರು ಪದಕ ಬೇಟೆ ನಡೆಸಲಿದ್ದಾರೆ. ಈ ಪೈಕಿ 10 ಆಟಗಾರರ ಮೇಲೆ ಹೆಚ್ಚಿನ ನರೀಕ್ಷೆ ಇದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ 3 ಸಲ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದ ಸುಮಿತ್ ಅಂಟಿಲ್ ಈ ಬಾರಿಯೂ ಪದಕ ಭರವಸೆ ಮೂಡಿಸಿದ್ದಾರೆ. ಎಫ್64 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸುಮಿತ್ ಸತತ 2 ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 2015ರಲ್ಲಿ ಸಂಭವಿಸಿದ ರಸ್ತೆ ಅಪಘಾತಲ್ಲಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಸುಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿ ಪ್ಯಾರಾಲಿಂಪಿಕ್ಸ್ ನ ಭಾರತ ತಂಡದ ಕಿರಿಯ ವಯಸ್ಸಿನ ಕ್ರೀಡಾಪಟು. 2 ಕೈಗಳಿಲ್ಲದ ಅವರು ಕಾಲಿನಿಂದಲೇ ಬಿಲ್ಲು–ಬಾಣ ಹಿಡಿದು ಬೇಟೆಯಾಡಲಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವೈಯಕ್ತಿಕ ಕಾಂಪೌಂಡ್ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದಿದ್ದರು. ಹೀಗಾಗಿ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶಟ್ಲರ್ ಕೃಷ್ಣನಗರ್, ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಮತ್ತೊಂದು ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ. 4 ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಪದಕ ಸಾಧನೆ ಮಾಡಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ 3 ಬಾರಿ ಪದಕ ಗೆದ್ದಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಅವಳಿ ಪದಕ ಸಾಧನೆ ಮಾಡಿದ್ದ ತಾರಾ ಶೂಟರ್ ಅವನಿ ಲೇಖರ ಈ ಬಾರಿಯೂ ಚಿನ್ನದ ಬೇಟೆಯಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ರಾಜಸ್ಥಾನದ ಅವನಿ ಟೋಕಿಯೋದಲ್ಲಿ 10 ಮೀ. ಏರ್ ರೈಫಲ್‌ನಲ್ಲಿ ಚಿನ್ನ ಹಾಗೂ 50 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಹಾಸನ ಮೂಲದ ಐಎಎಸ್ ಅಧಿಕಾರಿ, ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್(Suhas Lalinakere Yathiraj) ಈ ಬಾರಿ ಪ್ಯಾರಿಸ್ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪು ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
29 ವರ್ಷದ ತಮಿಳುನಾಡು ಮೂಲದ, ಭಾರತದ ಪ್ಯಾರಾ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು 2 ಪ್ಯಾರಾಲಿಂಪಿಕ್ಸ್‌ಗಳಲ್ಲೂ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2016ರಲ್ಲಿ ಚಿನ್ನ ಗೆದ್ದಿದ್ದ ಅವರು, ಟೋಕಿಯೋದಲ್ಲಿ ಬೆಳ್ಳಿ ಜಯಿಸಿದ್ದರು. ಈಗ ಹ್ಯಾಟ್ರಿಕ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ವಿಶ್ವಚಾಂಪಿಯನ್ ಶಿಪ್ ನಲ್ಲಿ 3 ಚಿನ್ನ ಸೇರಿ ಬ್ಯಾಡ್ಮಿಂಟನ್ ನಲ್ಲಿ 10 ಪದಕ ಸಾಧನೆ ಮಾಡಿರುವ ಮನೋಜ್ ಸರ್ಕಾರ್, ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸಲ್ಲಿ ಕಂಚು ಜಯಿಸಿದ್ದರು. ಈಗ ಚಿನ್ನದ ಬೇಟೆಗೆ ಸಿದ್ಧವಾಗಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ಮನೀಷ್ ನರ್ವಾಲ್ ಮೇಲೆ ಈ ಬಾರಿ ಪ್ಯಾರಿಸ್ನಲ್ಲಿಯೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಪುರುಷರ 847 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ನಿಶಾದ್ ಕುಮಾರ್ ಮತ್ತೊಂದು ಪದಕ ನಿರೀಕ್ಷೆಯಲ್ಲಿದ್ದಾರೆ. ಭಾರತದ ಪ್ಯಾರಾ ಶಟ್ಲರ್ ಮಾನಸಿ ಜೋಶಿ, ಪ್ಯಾರಿಸ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 35 ವರ್ಷದ ಅನುಭವಿ ಮಹಿಳಾ ಶಟ್ಲರ್ ಜೋಶಿ, 2019ರಲ್ಲಿ ಚಿನ್ನ ಸೇರಿ ಈ ವರೆಗೂ 7 ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿದ್ದಾರೆ. ಇವರೊಂದಿಗೆ ಇನ್ನೂ ಹಲವಾರು ಪ್ರತಿಭಾವಂತ ಕ್ರೀಡಾಪಟುಗಳು ನಾಳೆಯಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಬೇಟೆ ಮುಂದುವರೆಸಲಿದ್ದು, ಇಡೀ ಭಾರತವೇ ಹೆಮ್ಮೆಯ ಕ್ರೀಡಾಪಟುಗಳಿಗೆ ಶುಭ ಹಾರೈಸಿದೆ.