ಬೆಳಗಾವಿ: ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಹೊರ ಭಾಗದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನಾಕರರ ಮೇಲೆ ಲಾಠಿ ಚಾರ್ಜ್ ನಡೆದಿದೆ. ಈ ವಿಷಯವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೆ ಸಾಥ್ ನೀಡಲು ಆಗಮಿಸಿದ್ದ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಯಿತು. ಬೆಳಗಾವಿಗೆ ಟ್ರಾಕ್ಟರ್ ರ್ಯಾಲಿ ಮೂಲಕ ಪ್ರತಿಭಟನೆಗೆ ಸ್ವಾಮೀಜಿ ಕರೆ ನೀಡಿದ್ದರು. ಆದರೆ, ಇದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಆದರೂ ಹೋರಾಟಗಾರರು ಬಂದಿದ್ದರು.
ಈ ವೇಳೆ ಪ್ರತಿಭಟನಾಕಾರರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ತೂಕಾಟ- ತಳ್ಳಾಟ ನಡೆಯಿತು. ಆಗ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಯತ್ನಾಳ್ ಹಾಗೂ ಬೆಲ್ಲದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಹೋರಾಟಗಾರರಿಗೆ ಸರ್ಕಾರ ತಡೆ ಒಡ್ಡುತ್ತಿರುವುದನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಖಂಡಿಸಿದರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹೋರಾಟಗಾರರ ವಿರುದ್ಧ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ