ಚಿಕ್ಕೋಡಿ : ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಮರು ಮೇಲ್ಮನವಿಯನ್ನು ವಜಾ ಮಾಡಿ ಹೈಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠ ಈ ಹಿಂದೆ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ. ಮೂರು ತಿಂಗಳ ಒಳಗಾಗಿ ನ್ಯಾಯಮೂರ್ತಿಗಳ ನೇತೃತ್ವದ ವರದಿ ಕೊಡುವಂತೆ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ನೀಡಿದ ಆದೇಶವನ್ನು ರದ್ದು ಮಾಡುವಂತೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈಗ ದ್ವಿಸದಸ್ಯ ನ್ಯಾಯ ಪೀಠ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ ಆದೇಶಕ್ಕೆ ಬಸವ ಜಯಮೃತ್ಯುಂಜಯ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ವಿಚಾರವನ್ನು ಅಧಿವೇಶನದಲ್ಲಿ ನಮ್ಮ ಶಾಸಕರು ಚರ್ಚಿಸಿದ್ದರು. ಪ್ರತಿಭಟನೆಕಾರರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು. ನಾನು ಸತ್ಯಾಗ್ರಹ ಮಾಡಿದರು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ.
ವಕೀಲ ಪರಿಷತ್ ನವರು ನ್ಯಾಯಾಲಯ ಮೊರೆ ಹೋಗಿದ್ದರು. ನಮ್ಮ ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಅರ್ಜಿಯನ್ನು ಪುರಸ್ಕಾರ ಮಾಡಿದರು. ಸರ್ಕಾರ ಆದೇಶ ರದ್ದತಿಗೆ ಮರು ಮೇಲ್ಮನವಿ ಸಲ್ಲಿಸಿತ್ತು. ಈಗ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿರುವುದು ಸ್ತುತ್ಯಾರ್ಹ ಎಂದಿದ್ದಾರೆ.
2024ರ ಡಿಸೆಂಬರ್ 10ರಂದು ಸುವರ್ಣ ವಿಧಾನಸೌಧ ಮುಂದೆ ಪಂಚಸಾಲಿ ಸಮುದಾಯ ನಡೆಸಿದ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಲಾಟಿ ಚಾರ್ಜ್ ನಡೆಸಿದ್ದರು.