ಬೆಳಗಾವಿ ಚಳಿಗಾಲದ ಅಧಿವೇಶನದ ಸುವರ್ಣ ಸೌಧದದ ಮುಂದೆ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ ಹಿನ್ನೆಲೆಯಲ್ಲಿ ಸಿದ್ದು ಸರ್ಕಾರದ ಮೇಲೆ ಪಂಚಮಸಾಲಿ ಸಮಾಜ ಮುನಿಸಿಕೊಂಡಿದೆ. ಸಿದ್ದರಾಮಯ್ಯ ಸಿಎಂ ಆಗಿರುವ ತನಕ ನಾವು ಮೀಸಲಾತಿ ಕೇಳಲ್ಲ ಎಂದು ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮನ್ನು ಹೊಡೆಯುವ ಕೆಲಸ ಸಿಎಂ ಮಾಡಿದ್ದಾರೆ. ಅಸಂವಿಧಾನಿಕ ಹೋರಾಟ ಎಂದು ಅಧಿವೇಶನದಲ್ಲಿ ಮಾತನಾಡಿದ್ದಾರೆ. ಅದಕ್ಕಾಗಿ ನಾವು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರುವವರೆಗೂ ಮೀಸಲಾತಿ ಕೇಳಲ್ಲ. ಡಿಸೆಂಬರ್ 10 ರಂದು ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ ಆಗಿದೆ. ಹೀಗಾಗಿ ಡಿ.10ರಂದು ನಾವು ಲಿಂಗಾಯತ ಕರಾಳ ದಿನಾಚರಣೆ ಎಂದು ಆಚರಿಸುತ್ತೇವೆ.
50 ಸಾವಿರ ಪಂಚಮಸಾಲಿ ಹೋರಾಟಗಾರರು ಬಾವುಟ ಜೊತೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಸಮಾಜದ ಅನ್ನ ಉಂಡವರು ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಮುತ್ತಿಗೆ, ಪ್ರತಿಭಟನೆ ಅನ್ನುವುದಕ್ಕಿಂತ ಸಮಾಜ ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ. ಪಂಚಮಸಾಲಿ ಶಾಸಕರು ಸಮಾಜದ ಋಣ ತೀರಿಸುವ ಕೆಲಸ ಮಾಡಲಿ ಎಂದು ಶ್ರೀಗಳು ಹೇಳಿದ್ದಾರೆ.