ಬೆಂಗಳೂರು: ಪ್ಯಾನ್ ಇಂಡಿಯಾ ಚಿತ್ರ ಶಬ್ದಂ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ನಟ ಆದಿ ಪಿನಿಸೆಟ್ಟಿ ನಾಯಕನಾಗಿ, ಕನ್ನಡದ “ತಂದೆಗೆ ತಕ್ಕ ಮಗ”, “ರಾಮಕೃಷ್ಣ”, “ದೇವರಮಗ” ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಲೈಲಾ ಅಭಿನಯದ ಈ ಚಿತ್ರ ಫೆ. 28ರಂದು ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರ ಹಾರರ್, ಸೈನ್ಸ್ ಫಿಕ್ಷನ್, ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಶಬ್ದಂ ಫೆ. 28ರಂದು ಕನ್ನಡ ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ಅರಿವಝಗನ್ ವೆಂಕಟಾಚಲಂ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿ.ಕೆ. ಫಿಲಂಸ್ ರಾಜ್ಯದಾದ್ಯಂತ ವಿತರಣೆಯ ಜವಾಬ್ದಾರಿ ಹೊತ್ತಿದೆ. ಈ ಕುರಿತು ಚಿತ್ರ ತಂಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿತು.
ಚಿತ್ರದ ನಾಯಕ ಆದಿ ಪಿನಿಸೆಟ್ಟಿ ಮಾತನಾಡಿ, ‘ಶಬ್ದಂ’ ಪ್ಯಾರಾನಾರ್ಮಲ್ ಆ್ಯಕ್ಟಿವಿಟೀಸ್ ಮತ್ತು ಸೈನ್ಸ್ ಫಿಕ್ಷನ್ ಕಾನ್ಸೆಪ್ಟ್ ಮೇಲೆ ಮಾಡಿರುವ ಹಾರರ್ ಚಿತ್ರ ಇದು. ಅದ್ಭುತವಾದ ಮೇಕಿಂಗ್ ಅಲ್ಲದೆ ಕಥೆಯೇ ಚಿತ್ರದ ಹೀರೋ ಆಗಿದೆ. ತಮಿಳು ತೆಲುಗಿನಲ್ಲಿ ನಾನೇ ಡಬ್ ಮಾಡಿದ್ದೇನೆ. ನಿರ್ದೇಶಕರ ಜತೆ 15 ವರ್ಷದ ಹಿಂದೆ “ವೈಶಾಲಿ” ಎಂಬ ಸಿನಿಮಾ ಮಾಡಿದ್ದೆ. ನಿರ್ದೇಶಕರಿಗಾಗೇ ಈ ಸಿನಿಮಾ ಒಪ್ಪಿಕೊಂಡೆ. ನಾನು ಕೆಲವು ಕನ್ನಡ ಚಿತ್ರಗಳನ್ನು ನೋಡಿದ್ದೇನೆ. ಒಂದು ಒಳ್ಳೆ ಸಿನಿಮಾವನ್ನು ಎಲ್ಲ ಭಾಷೆಯವರು ಖಂಡಿತ ನೋಡುತ್ತಾರೆಂಬ ನಂಬಿಕೆಯಿದೆ ಎಂದಿದ್ದಾರೆ.
ನಿರ್ದೇಶಕ ಅರಿವಝಗನ್ ವೆಂಕಟಾಚಲಂ ಮಾತನಾಡಿ, ಈ ಸಿನಿಮಾದಲ್ಲಿ ಒಳ್ಳೆಯ ಕಥೆಯ ಜತೆಗೆ ಸ್ಕ್ರೀನ್ ಪ್ಲೇ, ಸೌಂಡ್ ಎಫೆಕ್ಟ್ ಪ್ರಮುಖ ಪಾತ್ರ ವಹಿಸಿದೆ. ನಾಯಕನ ಪಾತ್ರ ಕಾಪ್ ಮಾದರಿಯಲ್ಲಿ ಸಾಗುತ್ತದೆ. ನಾಯಕಿ ಲೈಲಾ ಅವರ ಪಾತ್ರ ಇಡೀ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ನಟಿ ಲೈಲಾ ಮಾತನಾಡಿ, ಶಬ್ದಂ ಚಿತ್ರದಲ್ಲಿ ನನ್ನದು ತುಂಬಾ ವಿಶೇಷವಾದ ಪಾತ್ರ. ಒಂದು ಲೈನ್ ಕಥೆ ಕೇಳಿಯೇ ನಾನು ಈ ಸಿನಿಮಾ ಒಪ್ಪಿಕೊಂಡೆ. ನನಗೂ ಹಾರರ್ ಸಿನಿಮಾಗಳು ಎಂದರೆ ತುಂಬಾ ಇಷ್ಟ. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿ ಕನ್ನಡ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಎನ್. ಸಿನಿಮಾಸ್ ನ ಮಂಜುನಾಥ ಅವರು ಶಬ್ದಂ ಚಿತ್ರವನ್ನು ಕನ್ನಡಕ್ಕೆ ತಂದಿದ್ದಾರೆ. ಎಸ್.ಎಸ್. ತಮನ್ ಅವರ ಸಂಗೀತ ಈ ಚಿತ್ರಕ್ಕಿದೆ.