ಬೆಂಗಳೂರು: ಅರಮನೆ ಮೈದಾನ ಟಿಡಿಅರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತಿಶ್ರೀ ಹಾಡಲು ಬಿಬಿಎಂಪಿ ಮುಂದಾಗಿದೆ.
ರಾಜ್ಯ ಸರ್ಕಾರ ಹಾಗೂ ರಾಜ ಮನೆತನದ ಹಗ್ಗಜಗ್ಗಾಟಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಈಗ ಮುಂದಾಗಿದೆ. ಅರಮನೆ ಮೈದಾನ ಒತ್ತುವರಿ ಮಾಡಿ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಮೂರು ಸಾವಿರ ಕೋಟಿ ಟಿಡಿಅರ್ ನ್ನು ರಾಜಮನೆತನ ಕೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದೆ.
ಸುಪ್ರೀಂ ಕೋರ್ಟ್ ಕೂಡ ರಾಜಮನೆತನದ ಪರ ಅದೇಶ ನೀಡಿದೆ. ಅದೇಶದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದಿದೆ. ಕೇವಲ 15 ಎಕರೆಗೆ ಮೂರು ಸಾವಿರ ಕೋಟಿ ರೂ. ನೀಡಬೇಕು ಎಂಬ ತೀರ್ಪಿಗೆ ರಾಜ್ಯ ಸರ್ಕಾರ ಬೆಚ್ಚಿ ಬಿದ್ದಿದೆ. ಹೀಗಾಗಿ ಇಂದು ಈ ಕುರಿತು ತುರ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆ.
ಪ್ರಕರಣದ ಕುರತು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಭೂಸ್ವಾಧೀನ ನಿರ್ಣಯ ಪ್ರಕ್ರಿಯೆ ಕೈಬಿಡುವ ಸಾಧ್ಯತೆ ಇದೆ. ರಸ್ತೆ ಅಗಲೀಕರಣ ಮಾಡದಿರಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಕೂಡ ಇದೆ. ಟಿಡಿಆರ್ ನೀಡಿದರೆ ಮುಂದಿನ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಈ ಪ್ರಕರಣ ಮಾನದಂಡವಾಗುವ ಆತಂಕ ಕೂಡ ಸರ್ಕಾರದ್ದಾಗಿದೆ. ಹೀಗಾಗಿ ಇಡೀ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಸರ್ಕಾರದ ತೀರ್ಮಾನ ಮಾಡಿದೆ. ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲು ತೀರ್ಮಾನಿಸಲು ಸರ್ಕಾರ ಸಂಪುಟ ಸಭೆ ಕರೆದಿದೆ.