ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರ ಬಹುನಿರೀಕ್ಷಿತ ವಿವಾಹವು ಕೊನೇ ಗಳಿಗೆಯಲ್ಲಿ ಮುಂದೂಡಲ್ಪಟ್ಟ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಸ್ಮೃತಿ ಮಂಧಾನ ಅವರ ತಂದೆಯ ಆರೋಗ್ಯ ಹದಗೆಟ್ಟ ಕಾರಣ ಮದುವೆ ಮುಂದೂಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದರೂ, ಇಂಟರ್ನೆಟ್‌ನಲ್ಲಿ ಪಲಾಶ್ ಮುಚ್ಚಲ್ ಅವರ ಹಳೆಯ ಪ್ರೇಮ ಪ್ರಕರಣದ ಫೋಟೋಗಳು ಹರಿದಾಡುತ್ತಿರುವುದು ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ವೈರಲ್ ಆದ ಪ್ರಪೋಸಲ್ ಫೋಟೋ
ಪಲಾಶ್ ಮುಚ್ಚಲ್ ಅವರು ತಮ್ಮ ಮಾಜಿ ಪ್ರಿಯತಮೆಗೆ ಮಂಡಿಯೂರಿ ಪ್ರೇಮ ನಿವೇದನೆ (ಪ್ರಪೋಸ್) ಮಾಡುತ್ತಿರುವ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಗುರುತಿಸಿರುವಂತೆ, ಆ ಫೋಟೋದಲ್ಲಿರುವ ಯುವತಿ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಎನ್ನಲಾಗಿದೆ. ಈ ಫೋಟೋ 2017ರದ್ದು ಎಂದು ಹೇಳಲಾಗುತ್ತಿದೆ. ಸ್ಮೃತಿ ಮಂಧಾನ ಅವರೊಂದಿಗೆ 2019ರಲ್ಲಿ ಸಂಬಂಧ ಬೆಳೆಸುವ ಮುನ್ನವೇ ಪಲಾಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಊಹಾಪೋಹಗಳು ಈ ಫೋಟೋದಿಂದ ಹುಟ್ಟಿಕೊಂಡಿವೆ. ಆದರೆ, ಈ ಫೋಟೋಗಳ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
ನಿಶ್ಚಿತಾರ್ಥದ ವಿಡಿಯೋ ಡಿಲೀಟ್
ಮದುವೆ ಮುಂದೂಡಿಕೆಯಾದ ಬೆನ್ನಲ್ಲೇ ಸ್ಮೃತಿ ಮಂಧಾನ ಅವರು ತಮ್ಮ ಇನ್‌ಸ್ಟಾ ಗ್ರಾಂ ಖಾತೆಯಿಂದ ನಿಶ್ಚಿತಾರ್ಥದ ವಿಡಿಯೋವನ್ನು ಡಿಲೀಟ್ ಮಾಡಿರುವುದು ಅಭಿಮಾನಿಗಳ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿಡಿಯೋದಲ್ಲಿ ಸ್ಮೃತಿ ತಮ್ಮ ಸಹ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ಅವರೊಂದಿಗೆ ಕಾಣಿಸಿಕೊಂಡಿದ್ದರು ಮತ್ತು ಕೊನೆಯಲ್ಲಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದರು. ಸ್ಮೃತಿ ಮಾತ್ರವಲ್ಲದೆ, ಅವರ ಸಹ ಆಟಗಾರ್ತಿಯರೂ ಸಹ ತಮ್ಮ ಖಾತೆಗಳಿಂದ ಈ ರೀಲ್ ಅನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ.
ತಂದೆಯ ಅನಾರೋಗ್ಯವೇ ಕಾರಣ?
ವರದಿಗಳ ಪ್ರಕಾರ, ಮದುವೆ ದಿನದಂದೇ ಬೆಳಿಗ್ಗೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಸಾಂಗ್ಲಿಯ ಸರ್ವಹಿತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕಾರಣದಿಂದಲೇ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಭಾವಿ ಮಾವನ ಆರೋಗ್ಯ ಸ್ಥಿತಿ ಕಂಡು ಪಲಾಶ್ ಮುಚ್ಚಲ್ ಕೂಡ ಆಘಾತಕ್ಕೊಳಗಾಗಿದ್ದರು ಮತ್ತು ತೀವ್ರ ಒತ್ತಡದಿಂದ ಅಸ್ವಸ್ಥರಾಗಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ. ಆದರೆ, ಮದುವೆ ಮುಂದೂಡಿಕೆ ಮತ್ತು ಹಳೆಯ ಫೋಟೋಗಳ ವೈರಲ್ ಆಗುವಿಕೆಯ ನಡುವಿನ ಸಂಬಂಧದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅಲ್ಲದೆ ಸ್ಮೃತಿ ಅವರ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮರಳಿದ್ದರೂ, ಮದುವೆಯ ಮುಂದಿನ ದಿನಾಂಕದ ಬಗ್ಗೆಯೂ ಕುಟುಂಬ ಬಹಿರಂಗಪಡಿಸದೇ ಇರುವುದು ಅಭಿಮಾನಿಗಳ ಆತಂಕಕ್ಕೆ ಹಾಗೂ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ಲಾಲುಗೆ ಬಂಗಲೆ ತೆರವು ನೋಟಿಸ್ : ಕೌಟುಂಬಿಕ ಕಲಹ ಮರೆತು ಅಪ್ಪನ ಪರ ನಿಂತ ರೋಹಿಣಿ ಆಚಾರ್ಯ



















