ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam attack) ಕುರಿತ ತನಿಖೆಯ ವೇಳೆ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗುತ್ತಿವೆ. ಈ ದಾಳಿಯ ಹಿಂದಿರುವ ಪಾಕಿಸ್ತಾನಿ ಭಯೋತ್ಪಾದಕ ಹಾಶಿಮ್ ಮೂಸಾ ಒಂದು ಕಾಲದಲ್ಲಿ ಪಾಕಿಸ್ತಾನದ ವಿಶೇಷ ಪಡೆಗಳಲ್ಲಿ ಪ್ಯಾರಾ ಕಮಾಂಡೋ ಆಗಿದ್ದ ಎಂಬ ವಿಚಾರ ತಿಳಿದುಬಂದಿದೆ. ಈಗ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ)ದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಈತನನ್ನು ಸ್ಥಳೀಯರಲ್ಲದವರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲೆಂದೇ ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್ಐ ನೇರವಾಗಿ ಭಾಗಿಯಾಗಿವೆ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಹಿಂದೂಗಳ ಮಾರಣಹೋಮದಲ್ಲಿ ಗಡಿಯಾಚೆಗಿನ ಕೈವಾಡವಿದೆ ಎಂಬ ಭಾರತದ ಆರೋಪಕ್ಕೆ ಇದು ಪುಷ್ಟಿ ನೀಡಿದೆ.
ಭಯೋತ್ಪಾದಕ ಗುಂಪುಗಳು, ಪಾಕಿಸ್ತಾನಿ ಸರ್ಕಾರಿ ಸಂಸ್ಥೆಗಳು ಮತ್ತು ಸೇನೆಯ ನಡುವಿನ ನಿಕಟ ಸಂಬಂಧಗಳ ಬಗ್ಗೆ ಮಾತನಾಡಿದ ಭದ್ರತಾ ಅಧಿಕಾರಿಯೊಬ್ಬರು, “ಪಾಕಿಸ್ತಾನದ ವಿಶೇಷ ಪಡೆ ಸ್ಪೆಷಲ್ ಸರ್ವೀಸ್ ಗ್ರೂಪ್ (ಎಸ್ಎಸ್ಜಿ) ಮೂಸಾನನ್ನು ಲಷ್ಕರ್ ಗೆ ಕೆಲಸ ಮಾಡಲು ಬಿಟ್ಟುಕೊಟ್ಟಿರುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
ಸ್ಪೆಷಲ್ ಸರ್ವೀಸ್ ಗ್ರೂಪ್ನ ಪ್ಯಾರಾ-ಕಮಾಂಡೋಗಳು ಅಸಾಂಪ್ರದಾಯಿಕ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಹೆಚ್ಚು ತರಬೇತಿ ಪಡೆದಿರುತ್ತಾರೆ. ಅವರ ಕಠಿಣ ಹಾಗೂ ತೀವ್ರವಾದ ತರಬೇತಿಯು ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿತಿಸ್ಥಾಪಕತ್ವ, ಕಾರ್ಯತಂತ್ರ, ಸುಧಾರಿತ ಶಸ್ತ್ರಾಸ್ತ್ರ ನಿರ್ವಹಣೆ, ಕೈಯಿಂದ ಕೈಗೆ ನೇರ ಯುದ್ಧ ಮತ್ತು ಬದುಕುಳಿಯುವ ಕೌಶಲ್ಯಗಳಿಗೆ ಒತ್ತು ನೀಡುತ್ತದೆ.
ಪಾಕಿಸ್ತಾನಿ ದಾಳಿಕೋರರಿಗೆ ಸರಕು ಮತ್ತು ಬೇಹುಗಾರಿಕೆಯಲ್ಲಿ ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾದ 15 ಕಾಶ್ಮೀರಿಗರನ್ನು ವಿಚಾರಣೆ ನಡೆಸಿದಾಗ ಮೂಸಾನ ಮಿಲಿಟರಿ ಹಿನ್ನೆಲೆ ಬಹಿರಂಗವಾಗಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ 2024 ರಲ್ಲಿ ಗಂಡರ್ ಬಾಲ್ಮನ ಗಗಾಂಗೀರ್ ಎಂಬಲ್ಲಿ ನಡೆದ ಹತ್ಯೆಗಳು(ಸ್ಥಳೀಯರಲ್ಲದ 6 ಮಂದಿ ಮತ್ತು ಒಬ್ಬ ವೈದ್ಯನ ಹತ್ಯೆ), ಬಾರಾಮುಲ್ಲಾದ ಬೂಟಾ ಪತ್ರಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಇಬ್ಬರು ಸೇನಾ ಪೋರ್ಟರ್ ಗಳನ್ನು ಬಲಿಪಡೆದುಕೊಂಡ ದಾಳಿ ಸೇರಿದಂತೆ ಹಿಂದಿನ ಹಲವು ಉಗ್ರ ಕೃತ್ಯಗಳಲ್ಲಿ ಮೂಸಾ ಸಾಮಾನ್ಯ ಕೊಂಡಿಯಾಗಿ ಹೊರಹೊಮ್ಮಿದ್ದಾನೆ ಎಂದು ಹೇಳಲಾಗಿದೆ.