ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿರುವಂತೆಯೇ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರ ಸಂಘಟನೆಯು ಸರಣಿ ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಕೆರಳುವಂತೆ ಮಾಡಿದೆ.
ಸೈನಿಕರನ್ನು ಸಾವಿನ ದವಡೆಗೆ ತಳ್ಳುವುದನ್ನು ಬಿಟ್ಟು, ಸೇನೆಯ ಉನ್ನತ ಅಧಿಕಾರಿಗಳೇ ನೇರವಾಗಿ ಯುದ್ಧಭೂಮಿಗೆ ಬರಬೇಕು ಎಂದು ಟಿಟಿಪಿಯ ಅಗ್ರ ಕಮಾಂಡರ್ ಈ ವಿಡಿಯೋಗಳಲ್ಲಿ ಮುನೀರ್‌ಗೆ ಸವಾಲು ಹಾಕಿದ್ದಾನೆ. ಅಲ್ಲದೇ, ನೀನು ಗಂಡಸಾಗಿದ್ದರೆ ನಮ್ಮನ್ನು ಎದುರಿಸು ಎಂದೂ ಹೇಳಿದ್ದಾನೆ.
ಅಕ್ಟೋಬರ್ 8 ರಂದು ಖೈಬರ್ ಪಖ್ತುಂಕ್ವಾದ ಕುರ್ರಂನಲ್ಲಿ ನಡೆದ ಹೊಂಚುದಾಳಿಯ ದೃಶ್ಯಗಳನ್ನು ಈ ವಿಡಿಯೋಗಳು ಒಳಗೊಂಡಿವೆ. ಈ ದಾಳಿಯಲ್ಲಿ 22 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಟಿಟಿಪಿ ಹೇಳಿಕೊಂಡಿದೆ. ಅಲ್ಲದೆ, ವಶಪಡಿಸಿಕೊಂಡ ಶಸ್ತ್ರಾಸ್ತ್ರ ಮತ್ತು ವಾಹನಗಳನ್ನು ಕೂಡ ವಿಡಿಯೋದಲ್ಲಿ ಪ್ರದರ್ಶಿಸಲಾಗಿದೆ. ಆದರೆ, ಪಾಕಿಸ್ತಾನ ಸೇನೆಯು ಈ ದಾಳಿಯಲ್ಲಿ ಕೇವಲ 11 ಸೈನಿಕರು ಮಾತ್ರ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿತ್ತು.
ಒಂದು ವಿಡಿಯೋದಲ್ಲಿ, ಪಾಕಿಸ್ತಾನಿ ಅಧಿಕಾರಿಗಳಿಂದ ಕಮಾಂಡರ್ ಕಾಜಿಮ್ ಎಂದು ಗುರುತಿಸಲ್ಪಟ್ಟಿರುವ ಟಿಟಿಪಿಯ ಹಿರಿಯ ನಾಯಕ, “ನೀನು ಗಂಡಸಾಗಿದ್ದರೆ ನಮ್ಮನ್ನು ಎದುರಿಸು” ಎಂದೂ, “ತಾಯಿಯ ಹಾಲು ಕುಡಿದಿದ್ದರೆ ನಮ್ಮೊಂದಿಗೆ ಹೋರಾಡು” ಎಂದು ನೇರವಾಗಿ ಸವಾಲು ಹಾಕಿದ್ದಾನೆ. ಅ.21ರಂದು ಟಿಟಿಪಿ ಕಮಾಂಡರ್ ಕಾಜಿಮ್‌ನನ್ನು ಹಿಡಿದುಕೊಟ್ಟವರಿಗೆ 10 ಕೋಟಿ ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಬಹುಮಾನ ನೀಡುವುದಾಗಿ ಪಾಕ್ ಸರ್ಕಾರ ಘೋಷಿಸಿತ್ತು.
ಗಡಿಯುದ್ದಕ್ಕೂ ನಡೆದ ಶೆಲ್ ದಾಳಿ, ವೈಮಾನಿಕ ದಾಳಿ ಮತ್ತು ಪ್ರತಿದಾಳಿಗಳ ನಂತರ, ಇತ್ತೀಚೆಗಷ್ಟೇ ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಹಾಗೂ ಕಾಬೂಲ್‌ನಲ್ಲಿರುವ ತಾಲಿಬಾನ್ ನೇತೃತ್ವದ ಸರ್ಕಾರದ ನಡುವೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಳ್ಳಲಾಗಿತ್ತು. ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಟಿಟಿಪಿಯಂತಹ ಸಶಸ್ತ್ರ ಗುಂಪುಗಳ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಈ ಕದನ ವಿರಾಮ ಜಾರಿಯಲ್ಲಿರುತ್ತದೆ ಎಂದು ಇಸ್ಲಾಮಾಬಾದ್ ಸ್ಪಷ್ಟಪಡಿಸಿದೆ.
ಟಿಟಿಪಿಯ ಇತ್ತೀಚಿನ ಯಶಸ್ಸುಗಳು ಇತರ ಹಿಂಸಾತ್ಮಕ ಸಂಘಟನೆಗಳಿಗೆ ಉತ್ತೇಜನ ನೀಡಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಲಷ್ಕರ್-ಎ-ಜಾಂಗ್ವಿ (ಎಲ್‌ಇಜೆ), ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಸಂಘಟನೆಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇತ್ತೀಚಿನ ವಾರಗಳಲ್ಲಿ ಟಿಟಿಪಿ ದಾಳಿಗಳು ಹೆಚ್ಚಾಗಿದ್ದು, ಈ ಹಿಂಸಾಚಾರವು ಪಾಕಿಸ್ತಾನ ಸೇನೆಯು ಬಂಡುಕೋರರನ್ನು ಹತ್ತಿಕ್ಕುವಲ್ಲಿ ಮತ್ತು ತೊಂದರೆಗೊಳಗಾದ ಖೈಬರ್ ಪಖ್ತುಂಕ್ವಾದಲ್ಲಿ ಪರಿಣಾಮಕಾರಿ ಆಡಳಿತ ತಂತ್ರವನ್ನು ರೂಪಿಸುವಲ್ಲಿ ವಿಫಲವಾಗಿರುವುದನ್ನು ಬಹಿರಂಗಪಡಿಸಿದೆ.