ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಯಹೂದಿ ಹಬ್ಬದ ಸಂಭ್ರಮದಲ್ಲಿದ್ದವರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 42ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು ಮೂರು ದಶಕಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದ್ದು, ಕೃತ್ಯದ ಹಿಂದೆ ಪಾಕಿಸ್ತಾನ ಮೂಲದ ತಂದೆ ಮತ್ತು ಮಗನ ಕೈವಾಡವಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಯಾರೀ ಹಂತಕರು?
ದಾಳಿಕೋರರನ್ನು 50 ವರ್ಷದ ಸಾಜಿದ್ ಅಕ್ರಮ್ ಮತ್ತು ಆತನ ಮಗ 24 ವರ್ಷದ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ. ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ತಂದೆ ಸಾಜಿದ್ ಅಕ್ರಮ್ ಹತ್ಯೆಯಾಗಿದ್ದು, ಮಗ ನವೀದ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಮೆರಿಕದ ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಇವರು ಪಾಕಿಸ್ತಾನಿ ಮೂಲದವರು ಎಂದು ತಿಳಿದುಬಂದಿದೆ. ಸಾಜಿದ್ 1998ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ಬಂದಿದ್ದ, ಆತನ ಮಗ ನವೀದ್ ಆಸ್ಟ್ರೇಲಿಯಾದಲ್ಲೇ ಹುಟ್ಟಿದವನು ಎಂದು ಗೃಹ ಸಚಿವ ಟೋನಿ ಬರ್ಕ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಜಿದ್ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಹೋಲುವ ಟೀಶರ್ಟ್ ಧರಿಸಿರುವ ಫೋಟೋಗಳು ವೈರಲ್ ಆಗಿವೆ.
ಘಟನೆ ನಡೆದಿದ್ದು ಹೇಗೆ?
ಭಾನುವಾರ ಸಂಜೆ ಸಿಡ್ನಿಯ ಬಾಂಡಿ ಬೀಚ್ ಬಳಿಯ ಉದ್ಯಾನವನದಲ್ಲಿ ಯಹೂದಿಗಳ ‘ಹನುಕ್ಕಾ’ (Hanukkah) ಹಬ್ಬದ ಆಚರಣೆಗಾಗಿ ಸುಮಾರು 1,000ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಸಂಜೆ 6:45ರ ಸುಮಾರಿಗೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ವ್ಯಕ್ತಿಗಳು ರೈಫಲ್ ಮತ್ತು ಶಾಟ್‌ಗನ್‌ಗಳ ಮೂಲಕ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಸುಮಾರು 10 ನಿಮಿಷಗಳ ಕಾಲ ನಡೆದ ಈ ದಾಳಿಯಿಂದ ಭಯಭೀತರಾದ ಜನರು ಪ್ರಾಣ ಉಳಿಸಿಕೊಳ್ಳಲು ಸಮುದ್ರ ತೀರದತ್ತ ಓಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಧೈರ್ಯ ಮೆರೆದ ಹಣ್ಣಿನ ವ್ಯಾಪಾರಿ
ಈ ಭೀಕರ ದಾಳಿಯ ನಡುವೆಯೂ ಅಹ್ಮದ್ ಅಲ್ ಅಹ್ಮದ್ ಎಂಬ ಹಣ್ಣಿನ ಅಂಗಡಿ ಮಾಲೀಕ ಅಪ್ರತಿಮ ಧೈರ್ಯ ಪ್ರದರ್ಶಿಸಿದ್ದಾರೆ. ಬಂದೂಕುಧಾರಿಯೊಬ್ಬನ ಮೇಲೆ ಎರಗಿ, ಆತನನ್ನು ಕೆಳಕ್ಕುರುಳಿಸಿ ನಿಶಸ್ತ್ರಗೊಳಿಸುವ ಮೂಲಕ ಹೆಚ್ಚಿನ ಸಾವು-ನೋವು ಸಂಭವಿಸುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಸಾಹಸವನ್ನು ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಕ್ರಿಸ್ ಮಿನ್ಸ್ ಅವರು ಶ್ಲಾಘಿಸಿದ್ದು, ಅವರನ್ನು “ನಿಜವಾದ ಹೀರೋ” ಎಂದು ಕರೆದಿದ್ದಾರೆ.
10 ವರ್ಷದ ಮಗುವೂ ಸಾವು
ಮೃತಪಟ್ಟವರಲ್ಲಿ 10 ವರ್ಷದ ಮಗುವಿನಿಂದ ಹಿಡಿದು 87 ವರ್ಷದ ವೃದ್ಧರವರೆಗಿನವರು ಸೇರಿದ್ದಾರೆ. ಮೃತಪಟ್ಟವರಲ್ಲಿ ಬಾಂಡಿ ಬೀಚ್‌ನ ಯಹೂದಿ ಸಮುದಾಯದ ಮುಖಂಡರಾದ ರಬ್ಬಿ ಎಲಿ ಶ್ಲಾಂಗರ್ ಕೂಡ ಒಬ್ಬರು. ಗಂಭೀರವಾಗಿ ಗಾಯಗೊಂಡಿರುವ ಹಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. 1996ರ ಪೋರ್ಟ್ ಆರ್ಥರ್ ಹತ್ಯಾಕಾಂಡದ ನಂತರ ಆಸ್ಟ್ರೇಲಿಯಾ ಕಂಡ ಅತಿ ದೊಡ್ಡ ದುರಂತ ಇದಾಗಿದೆ.
ವಿಶ್ವ ನಾಯಕರ ಖಂಡನೆ
ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಗೌರವಾರ್ಥ ಹೂಗುಚ್ಛವಿರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಇದೊಂದು ಯಹೂದಿ ವಿರೋಧಿ ಮತ್ತು ಹೀನ ಕೃತ್ಯ. ಆಸ್ಟ್ರೇಲಿಯಾದ ನೆಲದಲ್ಲಿ ನಡೆದ ಈ ದಾಳಿ ಪ್ರತಿಯೊಬ್ಬ ಆಸ್ಟ್ರೇಲಿಯನ್ನನ ಮೇಲೆ ನಡೆದ ಭಯೋತ್ಪಾದಕ ದಾಳಿ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಜಾಗತಿಕ ನಾಯಕರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗಾಜಾ ಯುದ್ಧದ ನಂತರ ಆಸ್ಟ್ರೇಲಿಯಾದಲ್ಲಿ ಯಹೂದಿ ವಿರೋಧಿ ಕೃತ್ಯಗಳು ಹೆಚ್ಚಾಗಿದ್ದು, ಇದು ಅದರ ಮುಂದುವರಿದ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆ ವಿವಾದ : ಸೋನಿಯಾ ಗಾಂಧಿ ಕ್ಷಮೆಯಾಚಿಸಲು ಬಿಜೆಪಿ ಪಟ್ಟು



















