ಇಸ್ಲಾಮಾಬಾದ್: ಆಪರೇಷನ್ ಸಿಂದೂರದಲ್ಲಿ ಭಾರೀ ಪೆಟ್ಟು ತಿಂದಿರುವ ಪಾಕಿಸ್ತಾನ ಉಗ್ರರನ್ನು ಪೋಷಿಸುವ ತನ್ನ ಚಾಳಿಯನ್ನು ಮಾತ್ರ ಬಿಡುತ್ತಿಲ್ಲ. ಭಾರತದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಭಯೋತ್ಪಾದಕ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಪುನರ್‌ನಿರ್ಮಾಣ ಮಾಡುವ ಕಾರ್ಯದಲ್ಲಿ ಪಾಕಿಸ್ತಾನ ತೊಡಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಪಾಕಿಸ್ತಾನದಲ್ಲಿನ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM), ಹಿಜ್ಬುಲ್ ಮುಜಾಹಿದೀನ್ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF)ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ 9 ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಭಾರತವು ನಿಖರವಾದ ಸೇನಾ ಕಾರ್ಯಾಚರಣೆ ನಡೆಸಿತ್ತು. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ಈ ದಾಳಿ ನಡಸಿತ್ತು. ಈ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಮುರಿದ್ಕೆಯಲ್ಲಿರುವ ಮರ್ಕಜ್ ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಬಹವಲ್ಪುರ್ ಪ್ರಧಾನ ಕಚೇರಿಯಂತಹ ಪ್ರಮುಖ ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಲಾಗಿತ್ತು.
ಗುಪ್ತಚರ ಮೂಲಗಳ ಪ್ರಕಾರ, ಈಗ ಪಾಕಿಸ್ತಾನವು ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಭಯೋತ್ಪಾದಕ ಶಿಬಿರಗಳನ್ನು ಗಡಿರೇಖೆಯ ದಟ್ಟ ಕಾಡುಗಳಲ್ಲಿ ಪುನರ್‌ನಿರ್ಮಾಣ ಮಾಡುತ್ತಿದೆ. ಯಾರಿಗೂ ಸುಲಭವಾಗಿ ಪತ್ತೆ ಹಚ್ಚಲಾಗದಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇವುಗಳನ್ನು ನಿರ್ಮಿಸಲಾಗುತ್ತಿವೆ. ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಮತ್ತು ಉಗ್ರರ ಒಳನುಸುಳುವಿಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ, ಈ ಶಿಬಿರಗಳ ಪುನರ್‌ನಿರ್ಮಾಣಕ್ಕೆ ಪಾಕಿಸ್ತಾನವು ವಿಶ್ವಬ್ಯಾಂಕ್ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ ಪಡೆದ ದೊಡ್ಡ ಮೊತ್ತದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಆರೋಪವು ಗಂಭೀರವಾದ ಚರ್ಚೆಗೆ ಕಾರಣವಾಗಿದೆ, ಏಕೆಂದರೆ ಈ ಸಂಸ್ಥೆಗಳಿಂದ ಒದಗಿಸಲಾದ ಹಣವನ್ನು ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗಾಗಿ ಬಳಸಬೇಕು. ಆದರೆ ಇದನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆತಂಕವಿದೆ.
ಆಪರೇಷನ್ ಸಿಂದೂರ ಭಾರತದ ಸಶಸ್ತ್ರ ಪಡೆಗಳಿಗೆ ಒಂದು ಪ್ರಮುಖ ಯಶಸ್ಸಾಗಿತ್ತು. ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು ಮತ್ತು ಒಂಬತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಗಿತ್ತು. ಇದರ ಜೊತೆಗೆ, ಪಾಕಿಸ್ತಾನದ ವಾಯುಪಡೆಯ ಆರು ಯುದ್ಧ ವಿಮಾನಗಳು, ಎರಡು ಗಸ್ತು ವಿಮಾನಗಳು, ಹತ್ತಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಒಂದು ಸಿ-130 ಹರ್ಕ್ಯುಲಸ್ ಸಾರಿಗೆ ವಿಮಾನವನ್ನು ಧ್ವಂಸಗೊಳಿಸಲಾಗಿತ್ತು. ಬಹವಲ್ಪುರ್‌ನಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನಾಶ ಮಾಡಲಾಗಿತ್ತು.