ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಗೆ(Pahalgam Attack) ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿರುವ ಭಾರತ ಸರ್ಕಾರ, ಇಂದು ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಸಸ್ಪೆಂಡ್ ಮಾಡಿದೆ. ಹೀಗಾಗಿ ಇನ್ನು ಮುಂದೆ ಪಾಕ್ ಸರ್ಕಾರದ ಟ್ವೀಟರ್ ಖಾತೆ ಭಾರತದಲ್ಲಿ ಲಭ್ಯವಿರುವುದಿಲ್ಲ.
ಬುಧವಾರ ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಯ ಬಳಿಕ ಪಾಕ್ ವಿರುದ್ಧ ಹಲವು ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪಾಕಿಸ್ತಾನದೊಂದಿಗೆ ಇದ್ದ ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದ ರದ್ದು, ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಸಿಬ್ಬಂದಿಗೆ ಗೇಟ್ ಪಾಸ್, ಅಟ್ಟಾರಿ-ವಾಘಾ ಗಡಿ ಮುಚ್ಚುವುದು, ಎರಡೂ ದೇಶಗಳ ನಡುವಿನ ವೀಸಾ ರದ್ದು ಸೇರಿದಂತೆ ಹಲವು ಘೋಷಣೆಗಳನ್ನು ಮಾಡಲಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ವಿರುದ್ಧ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಈ ಕ್ರಮಗಳನ್ನು ಪ್ರಕಟಿಸಿದ್ದರು.
ಅವುಗಳಲ್ಲಿ ಪ್ರಮುಖ ಅಂಶವೆಂದರೆ, ಎರಡೂ ದೇಶಗಳಲ್ಲಿನ ಹೈಕಮಿಷನ್ ಗಳ ಸಂಖ್ಯೆಯನ್ನು ಇಳಿಸುವುದು. ಅದರಂತೆ ಮೇ 1 ರೊಳಗಾಗಿ ಭಾರತ ಮತ್ತು ಪಾಕಿಸ್ತಾನ ಹೈಕಮಿಷನ್ ಗಳು ತಮ್ಮ ಸಿಬ್ಬಂದಿ ಸಂಖ್ಯೆಯನ್ನು 55 ರಿಂದ 30ಕ್ಕೆ ಇಳಿಸುವಂತೆ ಗುಡುವು ನೀಡಲಾಗಿದೆ. ಇದಲ್ಲದೇ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ನಿಂದ ಎಲ್ಲಾ ರಕ್ಷಣಾ, ನೌಕಾ ಮತ್ತು ವಾಯು ಕ್ಷೇತ್ರದ ಸಲಹೆಗಾರರನ್ನು ಭಾರತ ಹೊರಹಾಕಿದೆ. ವಾರದೊಳಗೆ ದೇಶವನ್ನು ತೊರೆಯುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಭಾರತವೂ ಇಸ್ಲಾಮಾಬಾದ್ ನಲ್ಲಿರುವ ತನ್ನ ಹೈಕಮಿಷನ್ ನಿಂದ ತನ್ನ ಸೇನಾ ಸಲಹೆಗಾರರನ್ನೂ ಹಿಂತೆಗೆದುಕೊಳ್ಳಲಿದೆ.
ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ಭಾರತ ಸ್ಥಗಿತಗೊಳಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾಗುವ ಯಾವುದೇ ಅಸ್ತಿತ್ವದಲ್ಲಿರುವ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಯನಿರ್ವಹಿಸುತ್ತಿರುವ ಏಕೈಕ ಭೂ ಗಡಿ ದಾಟುವ ಅಟ್ಟಾರಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಅನ್ನು ತಕ್ಷಣ ಮುಚ್ಚುವಂತೆ ಆದೇಶಿಸಲಾಗಿದೆ. ಮಾನ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆಗಳು ಮೇ 1ರ ಗಡುವಿನೊಳಗಾಗಿ ಪಾಕ್ ಗೆ ಮರಳಬಹುದು ಎಂದು ಮಿಸ್ರಿ ಹೇಳಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಿಸಿಎಸ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು. ಸಿಸಿಎಸ್ ಸಭೆ ಸೇರುವ ಮೊದಲು ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಹಲ್ಗಾಂ ದಾಳಿಯ ದುಷ್ಕರ್ಮಿಗಳಿಗೆ “ತಕ್ಕ ಉತ್ತರ ನೀಡಲಾಗುವುದು”. ದಾಳಿಕೋರರನ್ನು ಮಾತ್ರವಲ್ಲ, ಅವರಿಗೆ ಬೆಂಬಲ ನೀಡಿದವರನ್ನೂ ಬೇಟೆಯಾಡಲಾಗುವುದು ಎಂದು ಗುಡುಗಿದ್ದರು.