ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶ ವಿರುದ್ಧ ಬುಧವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ (Pakistan Cricket ) ಡಿಸಿಷನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ತಂತ್ರಜ್ಞಾನವನ್ನು ಬಳಸದಿರಲು ನಿರ್ಧರಿಸಿದೆ. ಕೈಯಲ್ಲಿ ದುಡ್ಡು ಇಲ್ಲದೇ ಇರುವುದೇ ಈ ನಿರ್ಧಾರಕ್ಕೆ ಕಾರಣ.
ಪಾಕಿಸ್ತಾನ ಕ್ರಿಕೆಟ್ ಅನ್ನು ನೋಡುವವರೇ ಇಲ್ಲ. ಹೀಗಾಗಿ ಸರಣಿಯ ಮೇಲಿನ ಪ್ರೇಕ್ಷಕರ ಆಸಕ್ತಿ ಮತ್ತು ವೆಚ್ಚದ ಸಮಸ್ಯೆ ಮುಂದೊಡ್ಡಿ ಜಾಗತಿಕವಾಗಿ ಜನಪ್ರಿಯವಾಗಿರುವ ಡಿಆರ್‌ಎಸ್ ಕೈಬಿಡಲಾಗಿದೆ ಪಿಸಿಬಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಡಿಆರ್‌ಎಸ್ ತಂತ್ರಜ್ಞಾನವನ್ನು ಅಳವಡಿಸುವುದು ಪ್ರಸಾರಕರಿಗೆ ಆರ್ಥಿಕವಾಗಿ ಪೂರಕವಲ್ಲ,” ಎಂದು ಮೂಲವೊಂದು ಹೇಳಿದೆ.
ಬಾಂಗ್ಲಾದೇಶ ತಂಡದ ಸವಾಲುಗಳು
ಬಾಂಗ್ಲಾದೇಶ ತಂಡವು ಪ್ರಮುಖ ಆಟಗಾರರಿಲ್ಲದೆ ಈ ಸರಣಿಯಲ್ಲಿ ಭಾಗವಹಿಸುತ್ತಿದೆ. ಅನುಭವಿ ಎಡಗೈ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನಲ್ಲಿ ಬೆರಳಿಗೆ ಗಾಯವಾದ ಕಾರಣ ಹೊರಗುಳಿದಿದ್ದಾರೆ. ಇದರ ಜೊತೆಗೆ, ಬಾಂಗ್ಲಾದೇಶದ ಕೆಲವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸದಸ್ಯರು ಭದ್ರತಾ ಕಾರಣಗಳಿಗಾಗಿ ಈ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ಲಿಟನ್ ದಾಸ್ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ತಂಡವು ಶಾರ್ಜಾದಲ್ಲಿ ಯುಎಇ ವಿರುದ್ಧ ನಡೆದ ಟಿ20 ಸರಣಿಯಲ್ಲಿ 2-1 ಅಂತರದಿಂದ ನಾಚಿಕೆಗೇಡಿನ ಸೋಲು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಿಸಿಬಿಯ ವೆಚ್ಚ ಕಡಿತ ನಿರ್ಧಾರಗಳು
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪ್ರಸಾರಕರು ಈ ಹಿಂದೆಯೂ ಇಂತಹ ನಿರ್ಧಾರಗಳನ್ನು ಕೈಗೊಂಡಿದ್ದನ್ನು ಕಾಣಬಹುದು. ಇತ್ತೀಚೆಗೆ ಭಾರತದೊಂದಿಗಿನ ಗಡಿ ಸಂಘರ್ಷದ ಬಳಿಕ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಎರಡನೇ ಹಂತದ ಸರಣಿಯಲ್ಲಿಯೂ ಡಿಆರ್‌ಎಸ್ ತಂತ್ರಜ್ಞಾನ ಬಳಸಲಾಗಿರಲಿಲ್ಲ. ಇದು ವೆಚ್ಚದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಹೇಳಲಾಗಿದೆ.
ಈ ಸರಣಿಯ ಮೊದಲ ಪಂದ್ಯ ಬುಧವಾರ (ಮೇ 28) ನಡೆಯಲಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಲಾಹೋರ್‌ನಲ್ಲಿ ಮುಖಾಮುಖಿಯಾಗಲಿವೆ. ಡಿಆರ್‌ಎಸ್ ಇಲ್ಲದೆ ನಡೆಯುವ ಈ ಸರಣಿಯು ಪಂದ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ನಿಶ್ಚಿತ.



















