ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ಪರಿಣಾಮವೆಂಬಂತೆ, ಎರಡೂ ದೇಶಗಳ ಗಡಿಯನ್ನು ಮುಚ್ಚಿರುವ ಪರಿಣಾಮವಾಗಿ, ಪಾಕಿಸ್ತಾನದಲ್ಲಿ ಟೊಮೆಟೊ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಎರಡೂ ದೇಶಗಳ ನಡುವಿನ ಸಂಘರ್ಷದಿಂದಾಗಿ, ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇ. 400ರಷ್ಟು ಹೆಚ್ಚಾಗಿದ್ದು, ಕೆ.ಜಿ.ಗೆ 600 ಪಾಕಿಸ್ತಾನಿ ರೂಪಾಯಿಗೆ ತಲುಪಿದೆ.
ಅಕ್ಟೋಬರ್ 11 ರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ 2,600 ಕಿ.ಮೀ. ಉದ್ದದ ಗಡಿಯನ್ನು ಮುಚ್ಚಲಾಗಿದೆ. ಪಾಕ್ ಸೇನೆಯ ವಾಯುದಾಳಿ ಮತ್ತು ಭೂಸೇನೆಗಳ ಸಂಘರ್ಷದ ನಂತರ ಈ ಕ್ರಮ ಕೈಗೊಳ್ಳಲಾಗಿದ್ದು, ಎರಡೂ ಕಡೆಗಳಲ್ಲಿ ಡಜನ್‌ಗಟ್ಟಲೆ ಸಾವು-ನೋವು ಸಂಭವಿಸಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ವ್ಯಾಪಾರದ ಮೇಲೆ ಬಿದ್ದ ಹೊಡೆತ
ಗಡಿ ಬಂದ್ ಆಗಿರುವುದರಿಂದ ಎರಡೂ ಬದಿಗಳಲ್ಲಿ ಸುಮಾರು 5,000 ಕಂಟೇನರ್‌ಗಳು ಸಿಲುಕಿಕೊಂಡಿವೆ. ಪಾಕ್-ಅಫ್ಘಾನ್ ವಾಣಿಜ್ಯ ಮಂಡಳಿಯ ಪ್ರಕಾರ, ಪ್ರತಿದಿನ ಉಭಯ ದೇಶಗಳಿಗೆ ಸುಮಾರು 1 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ. ಎರಡೂ ದೇಶಗಳ ನಡುವಿನ ವಾರ್ಷಿಕ ವ್ಯಾಪಾರ ವಹಿವಾಟು 2.3 ಬಿಲಿಯನ್ ಡಾಲರ್‌ಗಳಷ್ಟಿದ್ದು, ತಾಜಾ ಹಣ್ಣುಗಳು, ತರಕಾರಿಗಳು, ಖನಿಜಗಳು, ಔಷಧಿ, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪ್ರಮುಖವಾಗಿ ವಿನಿಮಯಗೊಳ್ಳುತ್ತವೆ. ಗಡಿ ಮುಚ್ಚಿದ್ದರಿಂದ “ರಫ್ತಿಗಾಗಿ ಸಿದ್ಧವಿದ್ದ ಸುಮಾರು 500 ಕಂಟೇನರ್‌ಗಳ ತರಕಾರಿಗಳು ಸಂಪೂರ್ಣವಾಗಿ ಹಾಳಾಗಿವೆ” ಎಂದು ವಾಣಿಜ್ಯ ಮಂಡಳಿ ತಿಳಿಸಿದೆ. ಟೊಮೆಟೊ ಜೊತೆಗೆ, ಅಫ್ಘಾನಿಸ್ತಾನದಿಂದ ಹೆಚ್ಚಾಗಿ ಆಮದಾಗುವ ಸೇಬಿನ ಬೆಲೆಯೂ ಪಾಕಿಸ್ತಾನದಲ್ಲಿ ಏರಿಕೆಯಾಗಿದೆ.
ಸಂಘರ್ಷಕ್ಕೆ ಕಾರಣ ಮತ್ತು ಮಾತುಕತೆ
ಅಫ್ಘಾನಿಸ್ತಾನದ ನೆಲದಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿರುವ ಉಗ್ರರನ್ನು ನಿಯಂತ್ರಿಸಬೇಕೆಂದು ಇಸ್ಲಾಮಾಬಾದ್ ಕಾಬೂಲ್‌ಗೆ ಒತ್ತಾಯಿಸಿತ್ತು. ಆದರೆ, ತಾಲಿಬಾನ್ ಈ ಆರೋಪವನ್ನು ನಿರಾಕರಿಸಿದ ನಂತರ ಸಂಘರ್ಷ ತಾರಕಕ್ಕೇರಿತ್ತು. ಕಳೆದ ವಾರಾಂತ್ಯದಲ್ಲಿ ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ, ಗಡಿ ವ್ಯಾಪಾರ ಇನ್ನೂ ಪುನರಾರಂಭವಾಗಿಲ್ಲ. ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ 25 ರಂದು ಇಸ್ತಾಂಬುಲ್‌ನಲ್ಲಿ ನಡೆಯಲಿದೆ.



















