ನವದೆಹಲಿ: ಭಾರತವು ಪಾಕಿಸ್ತಾನ ಗಡಿ ಸಮೀಪ ‘ತ್ರಿಶೂಲ್’ ಹೆಸರಿನ ಬೃಹತ್ ತ್ರಿ-ಸೇನಾ ಸಮರಾಭ್ಯಾಸಕ್ಕೆ ಸಜ್ಜಾಗುತ್ತಿದ್ದಂತೆ ಪಾಕಿಸ್ತಾನ ತಲ್ಲಣಗೊಂಡಿದೆ. ಸಮರಾಭ್ಯಾಸದ ವಿಚಾರ ತಿಳಿದುಬರುತ್ತಿದ್ದಂತೆ ಪಾಕಿಸ್ತಾನವು ತನ್ನ ಕೇಂದ್ರ ಮತ್ತು ದಕ್ಷಿಣ ಭಾಗದ ಅನೇಕ ವಾಯು ಮಾರ್ಗಗಳನ್ನು ನಿರ್ಬಂಧಿಸಿದೆ.
ಅಕ್ಟೋಬರ್ 28-29ರಂದು ವಾಯುಪ್ರದೇಶ ನಿರ್ಬಂಧಿಸಿ ಪಾಕಿಸ್ತಾನವು ವಾಯುಯಾನಿಗಳಿಗೆ ಸೂಚನೆ (NOTAM) ಹೊರಡಿಸಿದ್ದು, ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ, ಇದು ಭಾರತದ ಸಮರಾಭ್ಯಾಸಕ್ಕೆ ಪ್ರತಿಯಾಗಿ ನಡೆಸುತ್ತಿರುವ ಸೇನಾ ಕಸರತ್ತು ಅಥವಾ ಶಸ್ತ್ರಾಸ್ತ್ರ ಪರೀಕ್ಷೆಯ ಭಾಗವಾಗಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಅಕ್ಟೋಬರ್ 30 ರಿಂದ ನವೆಂಬರ್ 10ರವರೆಗೆ ಪಾಕ್ ಗಡಿಯ ಸರ್ ಕ್ರೀಕ್ ಪ್ರದೇಶದ ಬಳಿ ‘ತ್ರಿಶೂಲ್’ ಸಮರಾಭ್ಯಾಸ ನಡೆಸುವುದಾಗಿ ಈಗಾಗಲೇ ಪ್ರಕಟಿಸಿದೆ. ಸೇನೆಯ ಮೂರೂ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ.
ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಂತ ಮಹತ್ವದ ಜಂಟಿ ಕಾರ್ಯಾಚರಣೆಯಾಗಿದ್ದು, 28,000 ಅಡಿ ಎತ್ತರದವರೆಗೆ ವಾಯುಪ್ರದೇಶವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಆಯ್ಕೆ ಮಾಡಿಕೊಂಡಿರುವ ಪ್ರದೇಶ “ಅಸಾಮಾನ್ಯವಾಗಿದೆ” ಎಂದು ರಕ್ಷಣಾ ವಿಶ್ಲೇಷಕ ಡೇಮಿಯನ್ ಸೈಮನ್ ಟ್ವೀಟ್ ಮಾಡಿದ್ದಾರೆ.
ಸೇನೆಗಳ ಜಂಟಿ ಕಾರ್ಯಾಚರಣಾ ಸಾಮರ್ಥ್ಯ, ಆತ್ಮನಿರ್ಭರತೆ ಮತ್ತು ಆವಿಷ್ಕಾರವನ್ನು ಪ್ರದರ್ಶಿಸುವುದು ಈ ಸಮರಾಭ್ಯಾಸದ ಗುರಿಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕ್ರೀಕ್ ಮತ್ತು ಮರುಭೂಮಿ ವಲಯಗಳಲ್ಲಿ ಆಕ್ರಮಣಕಾರಿ ತಾಲೀಮುಗಳು ಹಾಗೂ ಸೌರಾಷ್ಟ್ರ ಕರಾವಳಿಯಲ್ಲಿ ಉಭಯಚರ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಸೇನೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಆದರೆ, ಭಾರತದ ಈ ಸಾಮರ್ಥ್ಯ ಪ್ರದರ್ಶನವು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿರುವುದಂತೂ ಅದರ ನಡೆಯಿಂದಲೇ ಸಾಬೀತಾಬಿದೆ.



















