ಇಸ್ಲಾಮಾಬಾದ್: ಭಾರತದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ನಂತರ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ, ತನ್ನ ಸೇನಾಪಡೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಮೂರೂ ಸೇನೆಗಳ ನಡುವೆ ಉತ್ತಮ ಸಮನ್ವಯ ಮತ್ತು ಏಕೀಕೃತ ಆಡಳಿತವನ್ನು ಖಚಿತಪಡಿಸಿಕೊಳ್ಳಲು ‘ಚೀಫ್ ಆಫ್ ಡಿಫೆನ್ಸ್ ಫೋರ್ಸಸ್’ ಎಂಬ ಹೊಸ ಹುದ್ದೆಯನ್ನು ರಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ 27ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು, ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಸಂವಿಧಾನದ 243ನೇ ವಿಧಿಗೆ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ವಿಶೇಷವೆಂದರೆ, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಜನರಲ್ ಅಸೀಮ್ ಮುನೀರ್ ಅವರಿಗೆ ಪರಮಾಧಿಕಾರ ನೀಡುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಇದು ಜಾರಿಯಾದರೆ, ಪಾಕಿಸ್ತಾನವು ಪ್ರಜಾಸತ್ತಾತ್ಮಕ ದೇಶದಿಂದ ಸೇನಾಡಳಿತದ ನಿರಂಕುಶ ಪ್ರಭುತ್ವವಾಗಿ ಮಾರ್ಪಾಡಾಗಲಿದೆ.
ಈ ತಿದ್ದುಪಡಿ ಮಸೂದೆಯ ಪ್ರಕಾರ, ಪ್ರಧಾನಮಂತ್ರಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು (ಚೀಫ್ ಆಫ್ ಡಿಫೆನ್ಸ್ ಫೋರ್ಸಸ್) ನೇಮಕ ಮಾಡುತ್ತಾರೆ. ಸೇನಾ ಮುಖ್ಯಸ್ಥರೇ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಲಿದ್ದು, ಅವರು ಪ್ರಧಾನಮಂತ್ರಿಯೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ವ್ಯೂಹಾತ್ಮಕ ಕಮಾಂಡ್‌ನ (National Strategic Command) ಮುಖ್ಯಸ್ಥರನ್ನು ನೇಮಕ ಮಾಡುತ್ತಾರೆ. ಈ ಹುದ್ದೆಯು ಪಾಕಿಸ್ತಾನ ಸೇನೆಯ ಅಧಿಕಾರಿಗೆ ಮೀಸಲಾಗಿರುತ್ತದೆ.
ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಫೀಲ್ಡ್ ಮಾರ್ಷಲ್, ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಮತ್ತು ಅಡ್ಮಿರಲ್ ಆಫ್ ದಿ ಫ್ಲೀಟ್ ಹುದ್ದೆಗಳಿಗೆ ಬಡ್ತಿ ನೀಡಲು ಸರ್ಕಾರಕ್ಕೆ ಈ ತಿದ್ದುಪಡಿ ಅಧಿಕಾರ ನೀಡುತ್ತದೆ. ಫೀಲ್ಡ್ ಮಾರ್ಷಲ್ ಶ್ರೇಣಿಯು ಜೀವಿತಾವಧಿಯವರೆಗೆ ಇರುತ್ತದೆ. ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರ (Chairman Joint Chiefs of Staff Committee) ಹುದ್ದೆಯು ನವೆಂಬರ್ 27, 2025 ರಂದು ಮುಕ್ತಾಯಗೊಳ್ಳಲಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
‘ಆಪರೇಷನ್ ಸಿಂದೂರ’ವೇ ಈ ಬದಲಾವಣೆಗೆ ಕಾರಣ
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷ ಹಾಗೂ ಆಧುನಿಕ ಯುದ್ಧದ ಸ್ವರೂಪದಿಂದ ಪಾಠ ಕಲಿತಿರುವ ಪಾಕಿಸ್ತಾನ, ಈ ಕ್ರಮಕ್ಕೆ ಮುಂದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7 ರಂದು ‘ಆಪರೇಷನ್ ಸಿಂದೂರ’ವನ್ನು ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿತ್ತು. ಈ ದಾಳಿಗಳಿಂದಾಗಿ ನಾಲ್ಕು ದಿನಗಳ ಕಾಲ ತೀವ್ರ ಸಂಘರ್ಷ ನಡೆದು, ಮೇ 10ರಂದು ಸೇನಾ ಕ್ರಮಗಳನ್ನು ನಿಲ್ಲಿಸುವ ಒಪ್ಪಂದದೊಂದಿಗೆ ಕೊನೆಗೊಂಡಿತ್ತು.
ಭಾರತದ ದಾಳಿಯಲ್ಲಿ ಅಮೆರಿಕ ನಿರ್ಮಿತ ಎಫ್-16 ಜೆಟ್‌ಗಳು ಸೇರಿದಂತೆ ಪಾಕಿಸ್ತಾನದ ಕನಿಷ್ಠ ಹನ್ನೆರಡು ಸೇನಾ ವಿಮಾನಗಳು ನಾಶವಾಗಿದ್ದವು ಅಥವಾ ಹಾನಿಗೊಳಗಾಗಿದ್ದವು ಎಂದು ಹೇಳಲಾಗಿದೆ. ಈ ಸಂಘರ್ಷದ ನಂತರ, ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿತ್ತು. ಈ ಮೂಲಕ ದೇಶದ ಇತಿಹಾಸದಲ್ಲಿ ಈ ಉನ್ನತ ಹುದ್ದೆಗೇರಿದ ಎರಡನೇ ಸೇನಾಧಿಕಾರಿ ಎಂಬ ಹೆಗ್ಗಳಿಕೆಗೆ ಮುನೀರ್ ಪಾತ್ರರಾಗಿದ್ದಾರೆ.
ಈಗ 27ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಫೆಡರಲ್ ಸಾಂವಿಧಾನಿಕ ನ್ಯಾಯಾಲಯವನ್ನು ಸ್ಥಾಪಿಸಲು, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಬದಲಾಯಿಸಲು ಮತ್ತು ಪ್ರಾಂತೀಯ ಸಚಿವ ಸಂಪುಟಗಳ ಮಿತಿಯನ್ನು ಬದಲಾಯಿಸಲು ಪ್ರಸ್ತಾಪಿಸಿದೆ. ಕಾನೂನು ಸಚಿವ ಅಜಮ್ ನಜೀರ್ ತರಾರ್ ಅವರು ಕ್ಯಾಬಿನೆಟ್ ಅನುಮೋದನೆ ಪಡೆದ ಕೆಲವೇ ಗಂಟೆಗಳಲ್ಲಿ ಈ ಮಸೂದೆಯನ್ನು ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಮಂಡಿಸಿದ್ದಾರೆ.
ಆದರೆ, ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇರುವಾಗ ಸಾಂವಿಧಾನಿಕ ತಿದ್ದುಪಡಿಯನ್ನು ಚರ್ಚಿಸುವುದು ಸೂಕ್ತವಲ್ಲ ಎಂದು ವಿರೋಧ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಅಲಿ ಜಾಫರ್ ಹೇಳಿದ್ದಾರೆ. ಸರ್ಕಾರ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಅಂಗೀಕರಿಸಲು ಅವಸರ ತೋರುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ತಮಗೆ ಶನಿವಾರವಷ್ಟೇ ಮಸೂದೆಯ ಪ್ರತಿ ಸಿಕ್ಕಿದ್ದು, ಇನ್ನೂ ಒಂದು ಪದವನ್ನೂ ಓದಿಲ್ಲವಾದ್ದರಿಂದ ಚರ್ಚಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಜೆರ್‌ಬೈಜಾನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ, 27ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದ್ದರು.
ಇದನ್ನೂ ಓದಿ: ಭಾರತದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳು ಅಮೆರಿಕ, ಜಾರ್ಜಿಯಾದಲ್ಲಿ ಅಂದರ್



















