ನವದೆಹಲಿ: ಪ್ರಸಕ್ತ ಸಾಲಿನ ಪದ್ಮಶ್ರೀ ಪುರಸ್ಕೃತರ ಸಾಲಿಗೆ ಕರ್ನಾಟಕದ ಮೂವರು ಸಾಧಕರು ಸೇರ್ಪಡೆಯಾಗಿದ್ದಾರೆ. ಬಾಗಲಕೋಟೆಯ ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್, ಕಲಬುರಗಿಯ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮನೆ ಹಾಗೂ ಕೊಪ್ಪಳದ ತೊಗಲು ಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಪದ್ಮ ಗೌರವ ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಪದ್ಮ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಶಾಲೆಯ ಮುಖವನ್ನೇ ನೋಡದ ಬಾಗಲಕೋಟೆಯ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಗೊಂದಲಿಯೇ ಉಸಿರು. ಅವರಿಗೆ ಈಗ 81 ವರ್ಷ ವಯಸ್ಸು. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯವನ್ನು ಗೊಂದಲಿ ಪದದ ಶೈಲಿಯಲ್ಲಿ ಹಾಡುವ ಕಲೆಗಾರಿಕೆ ಅವರಿಗೆ ಒಲಿದಿದೆ. ಹೀಗಾಗಿ ಇವರನ್ನು ಗೊಂದಲಿ ಹಾಡುಗಳ ಭೀಷ್ಮ ಎಂದೇ ಕರೆಯುತ್ತಾರೆ. ಈವರೆಗೆ 1000ಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದು, 150 ಗೊಂದಲಿ ಕಥೆಗಳನ್ನು ಹೇಳಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಇನ್ನು, ಗೊಂಬೆಯಾಟದ ಅಜ್ಜಿ ಎಂದೇ ಖ್ಯಾತಿ ಗಳಿಸಿರುವ ಕೊಪ್ಪಳದ ಭೀಮವ್ವಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಗೊಂಬೆ ಕುಣಿಸುವಲ್ಲಿ ಎತ್ತಿದ ಕೈ. ತಮ್ಮ 14ನೇ ವಯಸ್ಸಿನಲ್ಲೇ ಗೊಂಬೆಗಳ ನಂಟು ಬೆಳೆಸಿದ ಅವರು ಈಗ ರಾಜ್ಯದ ಮೊದಲ ತೊಗಲು ಗೊಂಬೆ ಕಲಾವಿದೆ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಸರಿಸುಮಾರು 70 ವರ್ಷಗಳಿಂದಲೂ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಗೊಂಬೆಗಳ ಮೂಲಕವೇ ಹೇಳಿದವರು. ಜಪಾನ್, ಜರ್ಮನಿ, ಅಮೆರಿಕ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಭೀಮವ್ವ ಅಜ್ಜಿ ಗೊಂಬೆಯಾಟ ಪ್ರದರ್ಶನ ಕೊಟ್ಟಿದ್ದಾರೆ. 1993ರಲ್ಲಿ ಇವರಿಗೆ ಇರಾನ್ ನ ಗೊಂಬೆಯಾಟ ಪ್ರಶಸ್ತಿಯೂ ಸಂದಿದೆ.

ಪದ್ಮ ಗೌರವಕ್ಕೆ ಪಾತ್ರರಾಗಿರುವ ಡಾ. ವಿಜಯಲಕ್ಷ್ಮೀ ದೇಶಮನೆ ಅವರು ಕಳೆದ 4 ದಶಕಗಳಿಂದಲೂ ಕ್ಯಾನ್ಸರ್ ವಿರುದ್ಧ ಹೋರಾಡುವ ಜನರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಾದಿಗ ಸಮುದಾಯದಿಂದ ಬಂದಿರುವ ದೇಶಮನೆ ಅವರು ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾ ಅವರಿಗೆ ಭರವಸೆಯ ಬೆಳಕಾದವರು.