ನವದೆಹಲಿ: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನೀತಿ ಬದಲಾವಣೆ ಮಾಡಿದ ಕಾರಣ ಪೋಷಕರ ಅವಲಂಬಿತರಾಗಿ ಎಚ್-4 ವೀಸಾ ಮೂಲಕ ಅಪ್ರಾಪ್ತ ವಯಸಿನಲ್ಲಿಅಮೆರಿಕಕ್ಕೆ ವಲಸೆ ಬಂದಿದ್ದ ಲಕ್ಷಾಂತರ ಭಾರತೀಯರ ಭವಿಷ್ಯಕ್ಕೆ ಈಗ ಕಾರ್ಮೋಡ ಸವಿದಿದೆ. ಅಮೆರಿಕದಲ್ಲಿಬದಲಾದ ವಲಸೆ ನಿಯಮಗಳಿಂದ ಭಾರತೀಯರು ಹೆಚ್ಚು ಹೊಂದಿಕೊಳ್ಳುವ ವಲಸೆ ನೀತಿ ಹೊಂದಿರುವ ದೇಶಗಳತ್ತ ದೃಷ್ಟಿ ಹರಿಸಿದ್ದಾರೆ.
ಈಗಾಗಲೇ ವಲಸೆ ನೀತಿಯಿಂದಾಗಿ ದಾಖಲೆ ಇಲ್ಲದೆ ವಾಸಿಸುತ್ತಿದ್ದ ನೂರಾರು ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ. ಈಗ ಮತ್ತೊಂದು ಸಮಸ್ಯೆ ಎದುರಾದ ಕಾರಣ, ಕೆನಡಾ, ಬ್ರಿಟನ್ ನಂತಹ ಸರಳ ವಲಸೆ ನೀತಿ ಹೊಂದಿರುವ ದೇಶಗಳನ್ನು ಆಯ್ಕೆ ಮಾಡಿಕೊಳ್ಳಲು ಯೋಚಿಸಿದ್ದಾರೆ. ಅಮರಿಕಕ್ಕೆ ವಲಸೆ ಬಂದಿದ್ದ 1.34 ಲಕ್ಷ ಮಕ್ಕಳು 2023ರಲ್ಲಿವಯಸ್ಕರಾಗಿದ್ದಾರೆ. ಪೋಷಕರು ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಅವಲಂಬಿತರಾಗಿ ಬಂದಿದ್ದ ಮಕ್ಕಳಿಗೆ ವೀಸಾ ಬದಲಿಸಿಕೊಳ್ಳುವ ಅವಕಾಶ ಇಲ್ಲದ ಕಾರಣ ಪಾಲಕರನ್ನು ಬಿಟ್ಟು ಸ್ವಯಂ ಗಡಿಪಾರಾಗುವ ಅಪಾಯ ಎದುರಿಸುತ್ತಿದ್ದಾರೆ.
ಪೋಷಕರ ಎಚ್-1ಬಿ ವೀಸಾ ಅಡಿಯಲ್ಲಿಬಂದಿದ್ದ ಅಪ್ರಾಪ್ತರು 21 ವರ್ಷ ತುಂಬುತ್ತಿರುವಾಗ ಬದಲಾದ ವಲಸೆ ನೀತಿಗಳಿಂದ ಸ್ವಯಂ ಗಡಿಪಾರಾಗುವ ಆತಂಕ ಎದುರಿಸುತ್ತಿದ್ದಾರೆ.
ಟ್ರಂಪ್ ಆಡಳಿತದ ವಲಸೆ ನೀತಿಗಳ ಪ್ರಕಾರ ಎಚ್-1ಬಿ ವೀಸಾ ಅಡಿಯಲ್ಲಿಅವಲಂಬಿತರು ದೇಶದಲ್ಲಿಮುಂದುವರಿಯಲು ಅರ್ಹತೆ ಹೊಂದಿರುವುದಿಲ್ಲ.
ಇದುವರೆಗೆ ಅಪ್ರಾಪ್ತರಿಗೆ ಒಂದು ವೀಸಾ ನಿಯಮ, ವಯಸ್ಕಾರಾದ ಬಳಿಕ ಮತ್ತೊಂದು ವೀಸಾಗೆ ಬದಲಿಸಿಕೊಳ್ಳಲು 2 ವರ್ಷಗಳ ಅವಕಾಶವಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನಿಯಮಗಳು ಸಾವಿರಾರು ಭಾರತೀಯರ ಭವಿಷ್ಯವನ್ನು ಕತ್ತಲೆಗೆ ತಳ್ಳಿವೆ. ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಹೆಚ್ಚುವರಿ ಆಮದು ಸುಂಕ ಹೆಚ್ಚಿಸುವುದಾಗಿಯೂ ಘೋಷಣೆ ಮಾಡಿದ್ದಾರೆ.