ಕಾನ್ಪುರ: ಶಾಲಾ ಮಾರ್ಗದಲ್ಲಿನ ರಸ್ತೆ ಗುಂಡಿಯಲ್ಲಿ ತಮ್ಮ ಮಗಳು ಜಾರಿ ಬಿದ್ದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು, ನೀರಿನಿಂದ ತುಂಬಿದ ಅದೇ ಗುಂಡಿಯಲ್ಲಿ ಹಾಸಿಗೆ ಮತ್ತು ದಿಂಬು ಇಟ್ಟುಕೊಂಡು ಮಲಗಿ ಸೋಮವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ!
ಈ ಘಟನೆ ನಡೆದಿದ್ದು ಉತ್ತರಪ್ರದೇಶದ ಕಾನ್ಪುರದ ಆನಂದ್ ಸೌತ್ ಸಿಟಿಗೆ ಹೋಗುವ ಮಾರ್ಗದಲ್ಲಿ. ಸ್ಥಳೀಯರ ಪ್ರಕಾರ, ಈ ರಸ್ತೆಯು ಹಲವಾರು ತಿಂಗಳಿಂದ ತೀವ್ರವಾಗಿ ಹದಗೆಟ್ಟಿದೆ. ಸ್ಥಳೀಯ ವಾರ್ಡ್ ಕೌನ್ಸಿಲರ್, ಶಾಸಕರು ಮತ್ತು ಸಚಿವರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಆರೋಪಿಸಲಾಗಿದೆ.
“ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರ, ನೀರಿನಿಂದ ತುಂಬಿದ ಮತ್ತು ಹಾಳಾದ ರಸ್ತೆಗಳಿಂದ ಉಂಟಾಗುತ್ತಿರುವ ದೈನಂದಿನ ಅಪಘಾತಗಳು ಹಾಗೂ ಗಾಯಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಈ ಪ್ರತಿಭಟನೆಯನ್ನು ನಡೆಸಲು ತಾನು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು ಮತ್ತು ಸ್ಥಳೀಯ ಪ್ರಯಾಣಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯಾರೂ ಅದರತ್ತ ಗಮನ ಕೊಡುತ್ತಿಲ್ಲ ಎಂದೂ ಆರೋಪಿಸಿದ್ದಾರೆ.
“ಈ ರಸ್ತೆ ಗುಂಡಿ ಬಿದ್ದು ತಿಂಗಳುಗಳೇ ಕಳೆದಿವೆ. ಆದರೂ ದುರಸ್ತಿ ಮಾಡುವವರಿಲ್ಲ. ನಾನು ಅನೇಕ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ — ಕೌನ್ಸಿಲರ್, ಸಚಿವರು, ಶಾಸಕರು, ಆದರೆ ಯಾರೂ ಕೇಳುತ್ತಿಲ್ಲ. ನಾವು ಏನು ಮಾಡಬೇಕು?” ಎಂದು ಆ ವ್ಯಕ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ಮಕ್ಕಳು ಇದೇ ರಸ್ತೆಯಲ್ಲಿ ಶಾಲೆಗೆ ಹೋಗುತ್ತಾರೆ. ಇಂದು ನನ್ನ ಮಗಳು ಜಾರಿ ಬಿದ್ದಳು. ಎಲ್ಲರ ಮಕ್ಕಳೂ ಇದೇ ರಸ್ತೆಯಲ್ಲಿ ನಡೆಯುತ್ತಾರೆ. ಅವರಿಗೇನಾದರೂ ಆದರೆ ಏನು ಗತಿ” ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಈ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿರುವುದಿಲ್ಲ. ವಾಹನಗಳು ಕೆಟ್ಟು ನಿಲ್ಲುವುದು, ಸೈಕಲ್ ಸವಾರರು ಬೀಳುವುದು ಮತ್ತು ಮಕ್ಕಳು ಮೊಣಕಾಲುದ್ದ ನೀರಿನಲ್ಲಿ ನಡೆದು ಶಾಲೆಗೆ ತಲುಪಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.