ರಾಜ್ಯದ ಮುಖ್ಯ ಕಾರ್ಯದರ್ಶಿ ವಿರುದ್ಧವೇ ಕೀಳು ಪದ ಬಳಸಿದ್ರಾ? ಬಿಜೆಪಿ ನಾಯಕ. ಹೌದು, ಜೂನ್ 30ರಂದು ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಹೋರಾಟ ನಡೆಸಿತ್ತು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಲು ನಿಯೋಗ ಮುಂದಾಗಿತ್ತು. ಈ ವೇಳೆ ನಿಯೋಗಕ್ಕೆ ಅಧಿಕಾರಿ ಸಿಕ್ಕಿರಲಿಲ್ಲ.
ಈ ಸಂದರ್ಭದಲ್ಲಿ ನಾಲಗೆ ಹರಿಬಿಟ್ಟಿದ್ದ ಎಂಎಲ್ ಸಿ ರವಿಕುಮಾರ್ ಅಧಿಕಾರಿ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿದ್ದರು. ರವಿಕುಮಾರ್ ರ ಈ ಹೇಳಿಕೆ ವಿರುದ್ಧವೀಗ ಕಾಂಗ್ರೆಸ್ ಸಮರ ಸಾರಿದೆ. ಈ ಹಿಂದೆ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಅವರ ವಿರುದ್ಧವೂ ಇದೇ ರವಿಕುಮಾರ್ ಕೀಳಾಗಿ ಮಾತನಾಡಿದ್ದರು. ಇದೆಲ್ಲವನ್ನು ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೈ ಮುಖಂಡರು ರವಿಕುಮಾರ್ ವಿರುದ್ಧ ಮುಗಿ ಬಿದ್ದಿದ್ದಾರೆ.
ಈ ನಡುವೆ ಸಚಿವ ಸಂತೋಷ್ ಲಾಡ್ ಕೂಡಾ ಬಿಜೆಪಿ ಎಂಎಲ್ ಸಿ ನಡೆ ಖಂಡಿನೀಯ ಎಂದಿದ್ದಾರೆ. ಇತ್ತ ಕಾಂಗ್ರೆಸ್ ಎಂಎಲ್ ಸಿ ಮನೋಹರ್, ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪರಿಷತ್ ಸಭಾಪತಿ ಹೊರಟ್ಟಿಯವರಿಗೆ ದೂರು ನೀಡಿದ್ದಾರೆ. ಮಹಿಳೆಯರ ಬಗ್ಗೆ ಅಗೌರವ ತೋರುವ ಇಂತಹ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅಂತಾ ಮನವಿ ಮಾಡಲಾಗಿದೆ.