ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ತಾಲಿಬಾನ್ ಸರ್ಕಾರ ತಳ್ಳಿಹಾಕಿದ್ದು, ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದೆ. ಈ ಆರೋಪಗಳನ್ನು ‘ಆಧಾರರಹಿತ’ ಮತ್ತು ‘ಅತಾರ್ಕಿಕ’ ಎಂದು ಬಣ್ಣಿಸಿರುವ ಅಫ್ಘಾನ್ ರಕ್ಷಣಾ ಸಚಿವ ಮೌಲ್ವಿ ಮೊಹಮ್ಮದ್ ಯಾಕೂಬ್ ಮುಜಾಹಿದ್, ಭಾರತದೊಂದಿಗಿನ ತಮ್ಮ ಸಂಬಂಧವು ಸಂಪೂರ್ಣವಾಗಿ ‘ಸ್ವತಂತ್ರ’ವಾಗಿದ್ದು, ಅಫ್ಘಾನಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಗಳಿಂದ ಮಾತ್ರ ಮಾರ್ಗದರ್ಶಿಸಲ್ಪಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕತಾರ್ ಮೂಲದ ಅಲ್ ಜಜೀರಾ ಸುದ್ದಿವಾಹಿನಿಗೆ ದೋಹಾದಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ನೆಲವನ್ನು ಬೇರೆ ದೇಶಗಳ ವಿರುದ್ಧ ಬಳಸಲು ನಾವು ಎಂದಿಗೂ ಬಿಡುವುದಿಲ್ಲ. ನಾವು ಭಾರತದೊಂದಿಗೆ ಸ್ವತಂತ್ರ ರಾಷ್ಟ್ರವಾಗಿ ಸಂಬಂಧವನ್ನು ಉಳಿಸಿಕೊಂಡಿದ್ದೇವೆ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳ ಚೌಕಟ್ಟಿನಲ್ಲಿ ಆ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತೇವೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ, “ನಾವು ಪಾಕಿಸ್ತಾನದೊಂದಿಗೆ ಉತ್ತಮ ನೆರೆಹೊರೆಯ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ನಮ್ಮ ಗುರಿ ಸಂಬಂಧಗಳನ್ನು ವಿಸ್ತರಿಸುವುದೇ ಹೊರತು ಉದ್ವಿಗ್ನತೆಯನ್ನು ಸೃಷ್ಟಿಸುವುದಲ್ಲ. ಪಾಕಿಸ್ತಾನದ ಆರೋಪಗಳು ನಿರಾಧಾರ, ಅಸಂಬದ್ಧ ಮತ್ತು ಸ್ವೀಕಾರಾರ್ಹವಲ್ಲ” ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಘರ್ಷದ ಹಿನ್ನೆಲೆ
ಅಕ್ಟೋಬರ್ 9ರಂದು ಕಾಬೂಲ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟಗಳ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಈ ಸ್ಫೋಟಗಳಿಗೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದ ತಾಲಿಬಾನ್, ಅದಕ್ಕೆ ಪ್ರತೀಕಾರವಾಗಿ ಗಡಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು, ತಾಲಿಬಾನ್ ಆಶ್ರಯ ನೀಡಿರುವ ಉಗ್ರಗಾಮಿ ಗುಂಪುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಹೇಳಿತ್ತು, ಆದರೆ ಕಾಬೂಲ್ ಇದನ್ನು ನಿರಾಕರಿಸಿದೆ. ಇದಲ್ಲದೆ, ಇಸ್ಲಾಮಿಕ್ ಸ್ಟೇಟ್‌ನ ಖೊರಾಸನ್ ಗುಂಪಿಗೆ (ISIS-K) ಪಾಕಿಸ್ತಾನವೇ ಆಶ್ರಯ ನೀಡುತ್ತಿದೆ ಎನ್ನುವುದು ತಾಲಿಬಾನ್ ಆರೋಪ.
ಕೆಲವು ದಿನಗಳ ಕಾಲ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಇದೀಗ ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ, ಈ ಶಾಂತಿ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ.