ಟಿಯಾಂಜಿನ್: ಟ್ರಂಪ್ ಸುಂಕ ಯುದ್ಧದ ನಡುವೆಯೇ ಚೀನಾದಲ್ಲಿ ಇಂದು ಆರಂಭವಾಗಿರುವ ಎಸ್‌ಸಿಒ(ಶಾಂಘೈ ಸಹಕಾರ ಒಕ್ಕೂಟ) ಶೃಂಗಸಭೆಯು ಜಗತ್ತಿನ ಗಮನ ಸೆಳೆದಿದ್ದು, ಭಾರತ ಮತ್ತು ಚೀನಾ ನಡುವೆ ಹೊಸ ಬಾಂಧವ್ಯದ ಶಕೆ ಆರಂಭವಾಗುವ ಸುಳಿವು ನೀಡಿದೆ.
ನಿನ್ನೆಯೇ ಚೀನಾದ ಟಿಯಾಂಜಿನ್ ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. “ಪರಸ್ಪರ ನಂಬಿಕೆ, ಗೌರವ ಮತ್ತು ಸಂವೇದನೆಯ ಆಧಾರದ ಮೇಲೆ ಭಾರತ-ಚೀನಾ ಸಂಬಂಧಗಳನ್ನು ಮುಂದುವರಿಸಲು ನಾನು ಬದ್ಧನಾಗಿದ್ದೇನೆ” ಎಂದು ಪ್ರಧಾನಿ ಮೋದಿ ಅವರು ಜಿನ್‌ಪಿಂಗ್ ಅವರಿಗೆ ತಿಳಿಸಿದ್ದಾರೆ.
ಗಡಿಯಲ್ಲಿನ ಸಂಘರ್ಷ ತಿಳಿಗೊಂಡ ನಂತರ ಶಾಂತಿ ಮತ್ತು ಸ್ಥಿರತೆಯ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ ಮೋದಿ, “ಕಳೆದ ವರ್ಷ ಕಜಾನ್‌ನಲ್ಲಿ ನಡೆದ ನಮ್ಮ ಚರ್ಚೆಯು ನಮ್ಮ ಸಂಬಂಧಗಳಿಗೆ ಸಕಾರಾತ್ಮಕ ದಿಕ್ಕನ್ನು ನೀಡಿತ್ತು. ಈಗ ಗಡಿಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ನಮ್ಮ ವಿಶೇಷ ಪ್ರತಿನಿಧಿಗಳು ಗಡಿ ನಿರ್ವಹಣೆಯ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿದ್ದಾರೆ,” ಎಂದೂ ಹೇಳಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಉಭಯ ದೇಶಗಳ ನಡುವಿನ ನೇರ ವಿಮಾನಯಾನ ಸೇವೆಗಳ ಪುನರಾರಂಭದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. “ನಮ್ಮಿಬ್ಬರ ನಡುವಿನ ಸಹಕಾರವು ನಮ್ಮ ಎರಡೂ ರಾಷ್ಟ್ರಗಳ 280 ಕೋಟಿ ಜನರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ. ಇದು ಸಮಸ್ತ ಮಾನವಕುಲದ ಕಲ್ಯಾಣಕ್ಕೂ ದಾರಿ ಮಾಡಿಕೊಡುತ್ತದೆ,” ಎಂದು ಅವರು ಒತ್ತಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, “ಭಾರತ ಮತ್ತು ಚೀನಾ ಸ್ನೇಹಿತರಾಗಿ ಮತ್ತು ಉತ್ತಮ ನೆರೆಹೊರೆಯವರಾಗಿರುವುದು ಅತ್ಯಗತ್ಯ. ಜಗತ್ತು ಪರಿವರ್ತನೆಯತ್ತ ಸಾಗುತ್ತಿದೆ. ಚೀನಾ ಮತ್ತು ಭಾರತ ಎರಡು ಪ್ರಾಚೀನ ನಾಗರಿಕತೆಯ ದೇಶಗಳು. ನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು. ‘ಡ್ರ್ಯಾಗನ್ ಮತ್ತು ಆನೆ’ ಒಟ್ಟಿಗೆ ಸಾಗುವುದು ಇಂದಿನ ಅಗತ್ಯವಾಗಿದೆ,” ಎಂದರು.
7 ವರ್ಷಗಳಲ್ಲೇ ಮೊದಲ ಭೇಟಿ
ಬರೋಬ್ಬರಿ 7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. 2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಮಾರಣಾಂತಿಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಅಕ್ಟೋಬರ್ 2024ರಲ್ಲಿ ಅಂತಿಮಗೊಂಡ ಒಪ್ಪಂದದ ಅಡಿಯಲ್ಲಿ ಡೆಮ್ಚೋಕ್ ಮತ್ತು ದೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಭಯ ದೇಶಗಳ ನಡುವಿನ ಸಂಘರ್ಷ ಬಹುತೇಕ ಅಂತ್ಯಗೊಂಡಿದೆ.