ಬೆಂಗಳೂರು: ಇತ್ತೀಚೆಗಷ್ಟೇ ನಮ್ಮ ಮೆಟ್ರೋ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಮೆಟ್ರೋ ಸಂಚಾರವನ್ನೇ ಬಿಟ್ಟು ಬಿಟ್ಟಿದ್ದಾರೆ ಎಂಬುವುದನ್ನು ಅಂಕಿ- ಅಂಶಗಳು ಸಾಬೀತು ಪಡಿಸುತ್ತಿವೆ. ಜನ ಯಾವ ಮಟ್ಟಿಗೆ ಮೆಟ್ರೋ ವಿರುದ್ಧ ಮೌನ ಪ್ರತಿಭಟನೆ ಆರಂಭಿಸಿದ್ದಾರೆ ಎಂದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಿಳಾ ಐಪಿಎಲ್ ಕ್ರಿಕೆಟ್ ಮ್ಯಾಚ್ ಇದ್ದರೂ ಮೆಟ್ರೋದತ್ತ ಜನರು ಸುಳಿದಿಲ್ಲ. ಹೀಗಾಗಿ ಮೆಟ್ರೋ ತನ್ನ ಹಳೆಯ ಖದರ್ ಕಳೆದುಕೊಳ್ಳುತ್ತ ಸಾಗುತ್ತಿದೆ.
ಪ್ರತಿ ದಿನ ಎಂಟೂವರೆ ಲಕ್ಷ ಜನರನ್ನು ಹೊತ್ತು ಸಾಗುತ್ತಿದ್ದ ಮೆಟ್ರೋದ ಒಡಲು ಈಗ ನಿಧಾನವಾಗಿ ಬರಿದಾಗುತ್ತ ಸಾಗುತ್ತಿದೆ. ಪರಿಣಾಮ ಮೆಟ್ರೋ ಸಂಚಾರದಲ್ಲಿ ಗದ್ದಲ, ಇಕ್ಕಟ್ಟು ಇಲ್ಲದಂತಾಗಿದೆ. ಮಹಾ ಶಿವರಾತ್ರಿ ದಿನದಂದು 5.20 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಟಿಕೆಟ್ ದರ ಏರಿಕೆಯ ನಂತರ ಪ್ರತಿ ದಿನ ಸರಾಸರಿ 2.50 ರಿಂದ 3 ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ, ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣ ಮಾಡುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬರುತ್ತಿದೆ. ಬೇಸಿಗೆಯ ಕಾರಣಕ್ಕೆ ಜನರು ಎಸಿಯೆಂದು ಮೆಟ್ರೋ ಮೊರೆ ಹೋಗುತ್ತಿದ್ದರು. ಆದರೆ, ಇದೀಗ ಸರಾಸರಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದರ ಏರಿಕೆಯ ವಿರುದ್ಧ ಪ್ರಯಾಣಿಕರ ಆಕ್ರೋಶ ಎದ್ದು ಕಾಣುತ್ತಿದೆ.
ದರ ಏರಿಕೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿ ಎಂ ಆರ್ಸಿಎಲ್, ಎಲ್ಲೆಲ್ಲಿ ಟಿಕೆಟ್ ದರ ದುಪ್ಪಟ್ಟು ಹೆಚ್ಚಾಗಿದೆಯೋ? ಅಲ್ಲೆಲ್ಲ ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ದರ ಕಡಿಮೆ ಮಾಡಿಲ್ಲ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಮೆಟ್ರೋ ಸಹವಾಸವೇ ಬೇಡ ಎನ್ನುವಂತೆ ವರ್ತಿಸುತ್ತಿದ್ದಾರೆ. ಮೆಟ್ರೋ ಬದಲಿಗೆ ಪರ್ಯಾಯ ಸಾರಿಗೆ, ಸ್ವಂತ ವಾಹನಗಳನ್ನು ಬಳಸುವ ಮೂಲಕ ಮೆಟ್ರೋ ಪ್ರಯಾಣ ಕಡಿಮೆ ಮಾಡಿದ್ದಾರೆ. ಹೀಗಾಗಿ ಮೆಟ್ರೋ ಅನಾಥವಾಗುತ್ತ ಸಾಗುತ್ತಿದೆ. ಇನ್ನಾದರೂ ಬಿಎಂಆರ್ ಸಿಎಲ್ ಪ್ರಯಾಣಿಕರ ಸ್ನೇಹಿ ಆಗುವುದೇ ಕಾಯ್ದು ನೋಡಬೇಕಿದೆ.