ಬೆಂಗಳೂರು: ಸಣ್ಣ ಸಣ್ಣ ಹಳ್ಳಿಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಈಗ ಯುಪಿಐ ಪಾವತಿ ಸಾಮಾನ್ಯವಾಗಿದೆ. ತರಕಾರಿ ಮಾರುವವರಿಂದ ಹಿಡಿದು ಶಾಪಿಂಗ್ ಮಾಲ್ ಗಳವರೆಗೆ ಯುಪಿಐ ಚಿರಪರಿಚಿತ ಹಾಗೂ ನಿತ್ಯ ಬಳಕೆಯ ಸೌಲಭ್ಯವಾಗಿದೆ. ಇದರ ಬೆನ್ನಲ್ಲೇ, ಒಬ್ಬ ವ್ಯಕ್ತಿಯ ಯುಪಿಐ ಮೂಲಕ ಬೇರೆಯವರು ಹಣ ಪಾವತಿಸುವ, ಕಳುಹಿಸುವ ಫೀಚರ್ ಬಂದಿದೆ. ಇದನ್ನೇ ಯುಪಿಐ ಸರ್ಕಲ್ ಎಂದು ಕರೆಯಲಾಗುತ್ತದೆ.
ಇದು ಒಬ್ಬ ವ್ಯಕ್ತಿಯ ಯುಪಿಐ ಅಕೌಂಟ್ ಬಳಸಿ ಬೇರೆಯವರು ಹಣ ಪಾವತಿಸಲು ಅವಕಾಶ ನೀಡುತ್ತದೆ. ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರ ಗುಂಪಿನ ಜತೆ ನಿಮ್ಮ ಹಣ ಹಂಚಿಕೊಳ್ಳಬಹುದು. ಇದರಲ್ಲಿ ಮೂಲ ಬಳಕೆದಾರನಿಂದ ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್ ನಲ್ಲಿ ಗರಿಷ್ಠ ಐವರನ್ನು ಸೇರಿಸಬಹುದು. ಇವರು ಸೆಕೆಂಡರಿ ಯೂಸರ್ ಗಳಾಗಿರುತ್ತಾರೆ. ಪ್ರಾಥಮಿಕ ಬಳಕೆದಾರನ ಯುಪಿಐ ಅಕೌಂಟ್ ಅನ್ನು ಐವರು ಬಳಸಲು ಸಾಧ್ಯವಾಗುತ್ತದೆ.
ಬ್ಯಾಂಕ್ ಅಕೌಂಟ್ ಮತ್ತು ಯುಪಿಐ ಅಕೌಂಟ್ ಹೊಂದಿರುವ ಪ್ರಾಥಮಿಕ ಬಳಕೆದಾರರು ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್ ನಲ್ಲಿ ಯಾರನ್ನು ಸೇರಿಸಬೇಕೋ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಿ ಸೇರಿಸಬಹುದು. ಇಲ್ಲವೇ, ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಮಾಡಿ ಸೇರಿಸಬಹುದು. ಯುಪಿಐ ಸರ್ಕಲ್ ಫೀಚರ್ ನಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದು. ಈ ಸರ್ಕಲ್ಗೆ ಸೇರಿಸಲಾಗುವ ವ್ಯಕ್ತಿಗಳಿಗೆ ಹಣ ಪಾವತಿಸಲು ಪೂರ್ಣ ಹಕ್ಕು ನೀಡಬಹುದು ಅಥವಾ ಪೇಮೆಂಟ್ ಮಾಡುವಾಗ ಕಡ್ಡಾಯವಾಗಿ ಅನುಮತಿ ಪಡೆಯುವ ಹಕ್ಕು ನೀಡಬಹುದು.
ಸಂಪೂರ್ಣ ಹಕ್ಕು ನೀಡಲಾದ ವ್ಯಕ್ತಿಯು ನಿಗದಿತ ಮೊತ್ತದಷ್ಟು ಹಣ ಪಾವತಿಗಳನ್ನು ಮಾಡಲು ಯಾವುದೇ ಪಿನ್ ನೀಡಬೇಕಿಲ್ಲ. ಆ ವ್ಯಾಪ್ತಿ ಮೀರಿದಾಗ ಮಾತ್ರ ಪ್ರಾಥಮಿಕ ಬಳಕೆದಾರರ ಅನುಮತಿ ಪಡೆಯಬೇಕಾಗುತ್ತದೆ. ಎರಡನೇ ಆಯ್ಕೆಯಲ್ಲಿ, ಸೆಕೆಂಡರಿ ಯೂಸರ್ ಗಳು ತಮ್ಮ ಪ್ರತಿಯೊಂದು ವಹಿವಾಟಿಗೂ ಪ್ರೈಮರಿ ಯೂಸರ್ ನ ಅನುಮತಿ ಪಡೆಯಬೇಕಾಗುತ್ತದೆ. ಸದ್ಯ ಭೀಮ್ ಆ್ಯಪ್ ನಲ್ಲಿ ಮಾತ್ರ ಯುಪಿಐ ಸರ್ಕಲ್ ಫೀಚರ್ ಇದೆ. ಮುಂದಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ಗೂ ಬರಲಿದೆ ಎಂದು ಹೇಳಲಾಗುತ್ತಿದೆ.